ನನ್ನ ಯಶಸ್ಸು ಅದು ನಿಮ್ಮದೇ ಯಶಸ್ಸು: ಯದುವೀರ್
ಸಂಜೆವಾಣಿ ನ್ಯೂಸ್
ಮೈಸೂರು: ಮಾ.27:- ತಮಗೆ ಯಾವುದೇ ಯಶಸ್ಸು ಸಿಕ್ಕರೂ ಅದು ನಿಮ್ಮ ಯಶಸ್ಸು ಎಂದು ಭಾವಿಸಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪವೊಂದರಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾಜಿಕ ಸಮ್ಮೇಳನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಮಹಾರಾಜರು ಅರಮನೆಯಿಂದ ಹೊರಗೆ ಬಂದು ಕೆಲಸ ಮಾಡುತ್ತಾರಾ ಎಂದರು. ನಾನೇ ಅರಮನೆಯಿಂದ ಆಚೆ ಬಂದಿದ್ದೇನೆ. ನನ್ನ ಕಚೇರಿಯನ್ನೂ ಸಹ ತೆರೆದಿದ್ದೇನೆ. ಅದು ನನ್ನ ಕಚೇರಿಯಲ್ಲ ನಿಮ್ಮ ಕಚೇರಿ ಅಂದುಕೊಳ್ಳಿ. ದಸರಾ ವೇಳೆ ಅರಮನೆ ಹಾಗೂ ದೇವಸ್ಥಾನಗಳಿಗೆ ಆಗಮಿಸಿ. ಯಾವುದೇ ಯಶಸ್ಸು ಸಿಕ್ಕರೂ ಅದು ನಿಮ್ಮ ಯಶಸ್ಸು ಎಂದು `Áವಿಸಿ ಎಂದರು.
ನಾನು ರಾಜಕೀಯಕ್ಕೆ ಬರಲು ಮೋದಿ ಅವರ ಕೆಲಸ, ಕಾರ್ಯವೈಖರಿ ನನಗೆ ಪ್ರೇರಣೆ ಎಂದ ಅವರು, ನಾನು ಅಭ್ಯರ್ಥಿಯಾದ ಬಳಿಕ ಅನೇಕ ಪ್ರಶ್ನೆಗಳನ್ನ ಎದುರಿಸಬೇಕಾದ ಅನಿವಾರ್ಯತೆ ಬಂತು. ಮಹರಾಜರು ಯಾವ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದಾರೆ ಅಂದರು. ಇದೆಲ್ಲವನ್ನೂ ಹೊರತುಪಡಿಸಿ ಮೋದಿಯವರ ಕೆಲಸ ನಾನು ರಾಜಕೀಯಕ್ಕೆ ಬರಲು ಪ್ರೇರಣೆ, ಎಲ್ಲಾ ಸಮಸ್ಯೆಗಳಿಗೆ ಮೋದಿಯವರೇ ಪರಿಹಾರ. ಮೋದಿಯರವರ ಕೆಲಸ, ಕಾರ್ಯ ವೈಖರಿ ನಮಗೆಲ್ಲ ಸ್ಫೂರ್ತಿ ಎಂದರು.
ಲಕ್ಷ್ಮಣ್‍ರನ್ನು ಜೈಲಿಗೆ ಕಳುಹಿಸುವೆ:
ಲಕ್ಷ್ಮಣ್ ನನ್ನ ಮೇಲೆ ಮಾಡಿದ್ದ ಸುಳ್ಳು ಆರೋಪ ಸಂಬಂಧ, ಅವರ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇನೆ. ಅವರನ್ನು ಖಂಡಿತವಾಗಿಯೂ ಜೈಲಿಗೆ ಕಳುಹಿಸುತ್ತೇನೆ. 47 ವರ್ಷಗಳ ಬಳಿಕ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಎನ್ನುತ್ತಿದ್ದಾರೆ. ಲಕ್ಷ್ಮಣ್ ಹೋದಲ್ಲಿ ಬಂದಲ್ಲಿ ಒಕ್ಕಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಒಕ್ಕಲಿಗ ಎಂದು ಸರ್ಟಿಫಿಕೆಟ್ ಕೊಟ್ಟವರು ಯಾರು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಯದುವೀರ್ ಮಂತ್ರಿ ಆಗಲಿದ್ದಾರೆ:
ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೂರನೇ ಬಾರಿ ಬಿಜೆಪಿ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಖಚಿತ. ಬಿಜೆಪಿ ಅಭ್ಯರ್ಥಿ ಯದುವೀರ್‍ಗೆ ಕೇಂದ್ರಮಂತ್ರಿ ಸ್ಥಾನ ದೊರೆಯಲಿದೆ ಎಂದು ಪ್ರತಾಪ್ ಸಿಂಹ ಭವಿಷ್ಯ ನುಡಿದರು.
ನಾವು ಇಲ್ಲಿ ಸತತ ಎರಡು ಬಾರಿ ಗೆದ್ದಿದ್ದೇವೆ. ಮೂರನೇ ಬಾರಿಯೂ ಗೆದ್ದರೆ ಸಹಜವಾಗಿಯೇ ಮಂತ್ರಿ ಸ್ಥಾನ ದೊರೆಯುತ್ತದೆ ಎಂದ ಅವರು ಮೈಸೂರು ಸಂಸ್ಥಾನದ ಕೊಡುಗೆ ಸದಾ ನಮ್ಮ ಮುಂದೆ ಇದೆ. ಮೀಸಲಾತಿ ಅಂದೇ ಜಾರಿಗೆ ತಂದಿದ್ದು ನಮ್ಮ ಮೈಸೂರಿನ ಮಹಾರಾಜರು. ದೇಶದ 7ನೇ ಮೆಡಿಕಲ್ ಕಾಲೇಜು ಮೈಸೂರಿನಲ್ಲಿದ್ದು 100ನೇ ವರ್ಷ ಪೂರೈಸುತ್ತಿದೆ. ಪ್ರಧಾನಿ ಮೋದಿ ಕೂಡ ಮೈಸೂರಿನ ಮಹಾರಾಜರ ಪರಂಪರೆಗೆ ಅನುಗುಣವಾಗಿ ಮುನ್ನೆಡೆಯುತ್ತಿದ್ದಾರೆ. ಮೈಸೂರಿಗೆ ಯಡಿಯೂರಪ್ಪ ಅವರು ಜಯದೇವ ಆಸ್ಪತ್ರೆ ತಂದರು. ಅಷ್ಟರಲ್ಲಿ ಸರ್ಕಾರ ಬದಲಾಗಿ ಸಿದ್ದರಾಮಯ್ಯ ಅವರು ಕಟ್ಟಡ ಕಟ್ಟಿಸಿದರು. ಬಿಜೆಪಿ ಸರ್ಕಾರವಿದ್ದಾಗ ಮೈಸೂರಿಗೆ ಹಲವು ಕೆಲಸಗಳಾಗಿವೆ. ಅಭಿವೃದ್ಧಿ ಕಾರ್ಯಗಳು ಮುಂದುವರಿಬೇಕು ಎಂದರೆ ಬಿಜೆಪಿ ಅಭ್ಯರ್ಥಿ ಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಒಂದು ವೇಳೆ ಏನಾದರೂ ಆಚಾತುರ್ಯ ಆದರೆ ಪ್ರತಾಪ್ ಸಿಂಹ ಕೂತಿದ್ದ ಜಾಗದಲ್ಲಿ, ಯದುವೀರ್ ಕೂರಬೇಕಾದ ಜಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಊಹಿಸಿಕೊಳ್ಳುತ್ತೀರಾ ಹೇಳಿ ಎಂದು ಸೂಚ್ಯವಾಗಿ ನುಡಿದ ಅವರು, ಈಗ ಬಂದು ನಾನು ಒಕ್ಕಲಿಗ ಎಂದು ಹೇಳಿಕೊಳ್ಳುತ್ತಾನೆ. ಈ ವ್ಯಕ್ತಿ ಯಾವ ಒಕ್ಕಲಿಗ ನನಗಂತೂ ಗೊತ್ತಿಲ್ಲ ಎಂದು ಟೀಕಿಸಿದರು.
ಮಹಾರಾಜರಿಗೆ ಗೌರವ ಕೊಡದ ವ್ಯಕ್ತಿ ಇಂದು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾನೆ. ಒಂದು ವೇಳೆ ಎಚ್ಚರಗೊಳ್ಳದಿದ್ದರೇ ಈ ವ್ಯಕ್ತಿ ಮುಂದುವರಿಯುತ್ತಾನೆ. ಮಹಾರಾಜರನ್ನು ಬೀದಿಯಲ್ಲಿ ನಿಂತು ನಿಂದಿಸುವ ವ್ಯಕ್ತಿ ಆ ಸ್ಥಾನಕ್ಕೆ ಬರಬಹುದು ಎಚ್ಚೆತ್ತುಕೊಳ್ಳಿ. ದೇಶಕ್ಕೆ ಮೋದಿ ಬೇಕು, ಹಾಗೆಯೇ ಮೈಸೂರಿಗೆ ಯದುವೀರ್ ಬೇಕು ಎಂದು ಹೇಳಿದರು.
ಶಾಸಕ ಟಿ.ಎಸ್ ಶ್ರೀವತ್ಸ ಮಾತನಾಡಿ, ಯದುವೀರ್ ಅವರು ಹಿಂದುಳಿದ ವರ್ಗಗಳ ನಾಯಕತ್ವವನ್ನು ವಹಿಸಕೊಳ್ಳಬೇಕು. ಡಿ. ದೇವರಾಜ ಅರಸು ಬಳಿಕ ಸಮುದಾಯದ ವ್ಯಕ್ತಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದು, ಎಲ್ಲರೂ ಬೆಂಬಲಿಸಬೇಕು ಎಂದರು.
ಸಮಾವೇಶದಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಮಾಜಿ ಉಪಮೇಯರ್ ರೂಪ, ಸಂದೇಶ್ ಸ್ವಾಮಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಮೈಸೂರು ಚಾಮರಾಜನಗರ ಎರಡು ಜಿಲ್ಲೆಯ ಕಾರ್ಯಕರ್ತರು ಉಪಸ್ಥಿತರಿದ್ದರು.