ಎಗ್‍ರೈಸ್ ಸೆಂಟರ್‍ಗಳ ಮೇಲೆ ದಾಳಿ
ಮುಧೋಳ,ಮಾ.27: ನಗರದ ಬಸ್‍ಸ್ಟ್ಯಾಂಡ್ ಎದರಿಗೆ ಬಸವೇಶ್ವರ ವೃತ್ತದ ಬಳಿಯಿರುವ ನಗರಸಭೆ ಕಾಂಪ್ಲೆಕ್ಸ್ ಮುಂದುಗಡೆ ರಸ್ತೆಯ ಮೇಲಿರುವ ಎಗ್‍ರೈಸ್ ಹಾಗೂ ಚಿಕನ್ ಕೋಕಾಗಳ ಮೇಲೆ ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಕ ಮತ್ತು ಸಿಬ್ಬಂದಿ ದಾಳಿ ನಡೆಸಿದರು.
ದಾಳಿಯ ಸಂದರ್ಭದಲ್ಲಿ ಪೌರಾಯುಕ್ತ ಗೋಪಾಲ ಕಾಸೆ ಸುದ್ಧಿಗಾರರೊಂದಿಗೆ ಮಾತನಾಡಿ, ನಗರಸಭೆಯ ಕಾಂಪ್ಲೆನ್ಸ್‍ನಲ್ಲಿರುವ ಅಂಗಡಿಗಳ ಹಾಗೂ ಸಾರ್ವಜನಿಕರು ನೀಡಲಾದ ದೂರಿನ ಮೇರೆಗೆ ಬಡ ಹಾಗೂ ಕೂಲಿಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನೂ ಅನೇಕ ಜನ ಇಲ್ಲಿ ಕಡಿಮೆ ದರದಲ್ಲಿ ದೊರೆಯುತ್ತದೆ ಎಂಬ ಉದ್ದೇಶದಿಂದ ಊಟೋಪಚಾರ ಮಾಡುತ್ತಿದ್ದು, ಇದರಲ್ಲಿ ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ವಸ್ತುಗಳ ಬಳಕೆ ಮಾಡುತ್ತಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಇದರ ಸೇವನೆಯಿಂದ ಕ್ಯಾನ್ಸರ್‍ನಂತಹ ಮಾರಕ ರೋಗವಲ್ಲದೇ, ಬೇಸಿಗೆ ಕಾಲವಾಗಿರುವುದರಿಂದ ಕಾಲರಾ, ಡೆಂಗ್ಯೂ, ಮಲೇರಿಯಾಗಳಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆಯೆಂದು ಅರಿತು ನೀಡಲಾದ ದೂರಿನನ್ವಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಈ ಕೋಕಾ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ ತಪಾಶಿಸಿದಾಗ ಸ್ವಚ್ಛತೆ ಇಲ್ಲದೇ ಇರುವುದು, ಅಶುದ್ಧ ನೀರು ಕುಡಿಯಲು ನೀಡುತ್ತಿರುವುದು, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿರುವುದು, ಆಹಾರ ತಯಾರಿಕೆಯಲ್ಲಿ ಅಶುದ್ಧ ಎಣ್ಣೆ ಬಳಕೆಯಂತಹ ಕಾರ್ಯಗಳು ಕಂಡು ಬಂದಿದ್ದು, ಇದು ಕ್ಯಾನ್ಸರ್ ಹಾಗೂ ಇನ್ನಿತರ ಮಾರಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿ, ಸಾರ್ವಜನಿಕರ ಆರೋಗ್ಯಕ್ಕೆ ಅಹಿತ ಉಂಟು ಮಾಡುವ ಇಂತಹ ಯಾವುದೇ ಕಾರ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ಜಿಲ್ಲಾಮಟ್ಟದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಇಲಾಖೆಗೆ ತಿಳಿಸಲಾಗಿದ್ದು ಇಂತಹ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ವಿಜಯಪುರದ ಆಹಾರ ಗುಣಮಟ್ಟದ ಅಧಿಕಾರಿ ಸುರೇಶ ಹೊಸಮನಿ ಮಾತನಾಡಿ, ಕಾನೂನಿನನ್ವಯ 1 ಕೆಜಿ ಮಾಂಸಾಹಾರಕ್ಕೆ 0.1 ಗ್ರಾಂ ಪರಮೀಶಿಯೇಬಲ್ ಕಲರ್ ಹಾಗೂ 0.5 ಫುಡ್ ಕಲರ್ ಸೇರಿಸಿ ಅವಕಾಶವಿದ್ದು, ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ದಾಳಿಯ ಸಂದರ್ಭದಲ್ಲಿ ಕೆಲವೊಂದು ಆಹಾರ ಪದಾರ್ಥ ಜಪ್ತಿ ಮಾಡಲಾಗಿತ್ತು. ಅವುಗಳ ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅಂತಹವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕ ಸುಭಾಸ ಕಾಂಬಳೆ, ಹನಮಂತ ಮಳಗಿ, ಭೀಮಸೇನ ಬಳಬಟ್ಟಿ, ಸುಭಾಸ ಕಾಂಬಳೆ ಉಪಸ್ಥಿತರಿದ್ದರು.