ಸಡಗರದ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ
ವಿಜಯಪುರ.ಮಾ೨೭:ಪಟ್ಟಣದಲ್ಲಿನ ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಒಂದೆಡೆ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿ ಬಿಜೆಪಿ ಪಕ್ಷದ ಕೆ ಸುಧಾಕರ್ ರವರು ಶ್ರೀ ಸೌಮ್ಯಕೇಶವ ಸ್ವಾಮಿ ದೇವರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ಭಾಗವಹಿಸಿ, ಬಿಜೆಪಿ ಹಾಗೂ ಜೆ.ಡಿ.ಎಸ್ ಕಾರ್ಯಕರ್ತರುಗಳು ಹಾಲು-ಜೇನಿನಂತೆ ಸೇರಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿರುವೆವೆಂದು ತಿಳಿಸಿದರು.
ಮತ್ತೊಂದೆಡೆ ಕಾಂಗ್ರೆಸ್ನ ಜಿಲ್ಲಾ ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ರವರು, ಶ್ರೀಧರ್ಮರಾಯಸ್ವಾಮಿ ದ್ರೌಪತಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ರಥೋತ್ಸವದಲ್ಲಿ ಭಾಗವಹಿಸಿ, ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್‌ರವರ ನಿವಾಸಕ್ಕೆ ತೆರಳಿ, ಕಾಂಗ್ರೆಸ್ ಮುಖಂಡರುಗಳನ್ನು ಮಾತನಾಡಿಸಿ, ತೆರಳಿದರು.
ರಥೋತ್ಸವದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ರವರೊಂದಿಗೆ ಪುರಸಭಾ ಸದಸ್ಯ ಶಿಲ್ಪಾ ಅಜಿತ್, ಟೌನ್ ಬಿಜೆಪಿ ಅಧ್ಯಕ್ಷ ಆರ್ ಸಿ ಮಂಜು ನಾಥ್, ಕಾರ್ಯದರ್ಶಿ ಮುನೀಂದ್ರ, ತಾಲೂಕು ಕಾರ್ಯದರ್ಶಿ ರವಿಕುಮಾರ್, ಮಹಂತಿನ ಮಠದ ಕಾರ್ಯದರ್ಶಿ ವಿ ವಿಶ್ವನಾಥ್. ಸಚಿವ ಕೆಎಚ್ ಮುನಿಯಪ್ಪ ರವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ರಕ್ಷಾ ರಾಮಯ್ಯ ಬರುವರೆಂದು ನಿರೀಕ್ಷಿಸಲಾಗಿದ್ದು, ಅವರು ಬಾರದಿದ್ದು, ಪುರಸಭಾ ಸದಸ್ಯರಾದ ಎಮ್ ಸತೀಶ್ ಕುಮಾರ್, ನಂಜಣ್ಣ, ಮುನಿಚಿನ್ನಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿನ ಕೋಟೆ ಬೀದಿಯಲ್ಲಿ ನೆಲೆಸಿ, ಅರ್ಜುನನಿಂದ ಪ್ರತಿಷ್ಟಾಪನೆಗೊಂಡ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಹೋಳಿ ಹಬ್ಬದ ದಿನದಂದು ರಥೋತ್ಸವ ನಡೆಯುವುದು ವಿಶೇಷವಾಗಿದ್ದು, ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಸುಪ್ರಭಾತ ಸೇವೆ, ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಏರ್ಪಡಿಸಲಾಗಿತ್ತು.
ಸಾವಿರಾರು ಭಕ್ತ ಜನರ ಜಯ ಘೋಷದ ಮಧ್ಯೆ ಗಾಂಧಿಚೌಕದಿಂದ ಹೊರಟ ದೇವರ ಬ್ರಹ್ಮ ರಥವು ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಹಾದು ಹೋಗಿ, ಗಂಗಾತಾಯಿ ದೇವಾಲಯ ವೃತ್ತವನ್ನು ಸೇರಿತು. ರಥೋತ್ಸವದ ಅಂಗವಾಗಿ ಮಹಂತಿನ ಮಠ, ಶ್ರೀ ನಗರೇಶ್ವರಸ್ವಾಮಿ ದೇವಾಲಯ , ಹಾಗೂ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಾನಕ, ಪಣ್ಯಾರ, ಕೋಸಂಬರಿ ವಿತರಣೆ, ಮಂಟಪ ಪಡಿಸೇವೆ ಜರುಗಿದವು.
ಸಂಜೆಯವರೆಗೆ ಗಂಗಾತಾಯಿ ಸರ್ಕಲ್‌ನಲ್ಲಿ ಭಕ್ತರು ನೆರೆದು, ಪೂಜೆ ಸಲ್ಲಿಸಿದ ನಂತರ ಬಜಾರ್ ರಸ್ತೆ ಮೂಲಕ ಶ್ರೀ ರುದ್ರದೇವರ ದೇವಾಲಯದ ಮುಂಭಾಗದಿಂದ ಗಾಂಧಿಚೌಕದವರೆಗೆ ರಥವನ್ನು ಎಳೆದು ಧೂಳೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.