ಒಳಚರಂಡಿ ತ್ಯಾಜ್ಯ ನೀರಿನಿಂದ ಕಲುಷಿತಗೊಳ್ಳುತ್ತಿರುವ ಶುದ್ದನೀರು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.27: ಪಟ್ಟಣದ ಹೊರವಲಯದಲ್ಲಿರುವ ಒಳ ಚರಂಡಿ ನೀರು ಪಂಪ್ ಮಾಡುವ ವೆಟ್ ವೆಲ್ ಘಟಕ ಇದುವರೆಗೂ ಕಾರ್ಯಾರಂಭ ಮಾಡದ ಪರಿಣಾಮ ಪಟ್ಟಣದ ಮಲಯುಕ್ತ ತ್ಯಾಜ್ಯ ನೀರು ಕಾಗುಂಡಿ ಹಳ್ಳದ ಮೂಲಕ ಪುರಸಭಾ ವ್ಯಾಪ್ತಿಯ ಹೊಸಹೊಳಲು ದೊಡ್ಡಕೆರೆಯನ್ನು ಸೇರುತ್ತಿದೆ. ಇದರ ಪರಿಣಾಮ ಕೆರೆಯ ಪರಿಶುದ್ದ ನೀರು ಕಲುಷಿತಗೊಂಡಿದ್ದು ದನಕರುಗಳಿಗೆ ಕುಡಿಯುವ ನೀರು ಕಲುಷಿತಗೊಳ್ಳರಾಂಭಿಸಿದೆ.
ಕಳೆದ 15 ವರ್ಷಗಳ ಹಿಂದೆ ಆರಂಭಗೊಂಡ ಒಳಚರಂಡಿ ಯೋಜನೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪುರಸಭೆ ಗುತ್ತಿಗೆದಾರರಿಗೆ ನಿರಪೇಕ್ಷಣಾ ಪತ್ರ ನೀಡಿ ಕಾಮಗಾರಿಯನ್ನು ಹಸ್ತಾಂತರಿಸಿಕೊಂಡಿದೆ. ಪಟ್ಟಣದ ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ ಸುಮಾರು ಹದಿನೈದು ವರ್ಷಗಳೇ ಕಳೆಯುತ್ತ ಬಂದರು ಕಾಮಗಾರಿ ಪೂರ್ಣಗೊಂಡಿಲ್ಲ. ಪುರಸಭಾ ವ್ಯಾಪ್ತಿಯ ಮನೆಯ ಶೌಚಾಲಯದ ಮಲ, ಮೂತ್ರದ ತ್ಯಾಜ್ಯವನ್ನು ಅಪೂರ್ಣ ಕಾಮಗಾರಿಯಾಗಿರುವ ಒಳ ಚರಂಡಿಗೆ ಸಂಪರ್ಕ ಕಲ್ಪಿಸಿದ್ದರಿಂದ ಸಮರ್ಪಕವಾಗಿ ತ್ಯಾಜ್ಯ ನೀರು ವೆಟ್‍ವೆಲ್ ಸೇರುತ್ತಿಲ್ಲ. ಒಳಚರಂಡಿಯ ಕಲುಷಿತ ತ್ಯಾಜ್ಯದ ನೀರು ಪಟ್ಟಣದ ಕೆಲವು ಕಡೆ ಮ್ಯಾನ್ ಹೋಲ್‍ಗಳಲ್ಲಿ ತುಂಬಿ ಹರಿಯುತ್ತದೆ.
ಕಳೆದ ಹದಿನೈದು ವರ್ಷಗಳಿಂದಲೂ ಒಳಚರಂಡಿಯ ಕಲುಷಿತ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಹೊಸಹೊಳಲು ಬಳಿ ವೆಟ್‍ವೆಲ್ ಸ್ಥಾಪಿಸಲಾಗಿದೆ, ಕಾಗುಂಡಿ ಹಳ್ಳದ ಬಳಿ ಒಳಚರಂಡಿ ತ್ಯಾಜ್ಯವನ್ನು ಶುದ್ಧೀಕರಿಸುವ ಯಂತ್ರಗಾರವಿದ್ದು ಅದು ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮ ಪಟ್ಟಣದ ತ್ಯಾಜ್ಯನೀರು ಶುದ್ದೀಕರಣಗೊಳ್ಳದೆ ಕಾಗುಂಡಿ ಹಳ್ಳಕ್ಕೆ ಬೀಳುತ್ತಿದೆ. ಕಾಗುಂಡಿ ಹಳ್ಳದ ಮೂಲಕ ಕೆಳಬಾಗದ ಹೊಸಹೊಳಲು ದೊಡ್ಡಕೆರೆಯನ್ನು ಕಲುಷಿತ ನೀರು ಸೇರುತ್ತಿದ್ದು ಕೆರಯಲ್ಲಿನ ಅಲ್ಪಸ್ವಲ್ಪ ಶುದ್ದನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ.
ಕೆ.ಆರ್.ಪೇಟೆ-ಹೊಸಹೊಳಲು ಅವಳಿ ಪಟ್ಟಣಗಳು ಸೇರಿದಂತೆ ಕೆ.ಆರ್.ಪೇಟೆ ಪುರಸಭೆಯ ಎಲ್ಲಾ 23 ವಾರ್ಡುಗಳಲ್ಲಿಯೂ ಒಳಚರಂಡಿ ಯೋಜನೆಯ ಪೈಪ್‍ಲೈನ್ ಹಾಗೂ ಮ್ಯಾನ್‍ಹೋಲ್‍ಗಳು ಅರ್ಧಂಬರ್ಧಕ್ಕೆ ನಿಂತಿದ್ದು ಸರ್ಕಾರದ ಕೋಟ್ಯಂತರ ರೂಪಾಯಿ ಹಣ ವ್ಯರ್ಥವಾಗಿ ಪೆÇೀಲಾಗುತ್ತಿದೆ. ಇದರ ನಡುವೆಯೇ ಪಟ್ಟಣದ ಹೊರವಲಯದ ಕಾಗುಂಡಿ ಹಳ್ಳದ ಬಳಿಯಿರುವ ವೆಟ್ ವೆಲ್ ಘಟಕ ಇದುವರೆಗೂ ಕಾರ್ಯನಿರ್ವಹಣೆ ಮಾಡದ ಪರಿಣಾಮ ಪಟ್ಟಣಿಗರ ಮಲಯುಕ್ತ ತ್ಯಾಜ್ಯ ನೀರು ಕಾಗುಂಡಿ ಹಳ್ಳದ ಮೂಲಕ ಕೆಳಭಾಗದ ಹೊಸಹೊಳಲು ದೊಡ್ಡ ಕೆರೆಯನ್ನು ಸೇರುತ್ತಿದೆ. ಪಟ್ಟಣದ ಒಳಚರಂಡಿಗಳ ಕಲುಷಿತ ನೀರು ಹಾಗೂ ತ್ಯಾಜ್ಯ ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ದೊಡ್ಡ ಕೆರೆಗೆ ಸೇರುತ್ತಿದ್ದು ಕೆರೆಯಲ್ಲಿರುವ ಅಲ್ಪಸ್ವಲ್ಪ ನೀರು ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆರೆಗೆ ಪಟ್ಟಣದ ಒಳ ಚರಂಡಿ ನೀರು ಮತ್ತು ತ್ಯಾಜ್ಯ ಸೇರುತ್ತಿದೆ. ಈ ನೀರನ್ನ ದನಕರುಗಳು ಕುಡಿಯುವುದಕ್ಕೆ ಬಳಸಲಾಗುತ್ತಿದೆ. ಈ ನೀರನ್ನ ದನಕರುಗಳು ಕುಡಿದರೆ ಸಾಂಕ್ರಾಮಿಕ ರೋಗಗಳು ತಗುಲಿ ಸಾವನ್ನಪ್ಪುವ ಭಯ ಕಾಡುತ್ತಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ. ಇನ್ನು ಕಾಗುಂಡಿ ಹಳ್ಳದ ಅಕ್ಕಪಕ್ಕದಲ್ಲಿರುವ ಜಮೀನಿನಲ್ಲಿ ಬೇಸಾಯ ಮಾಡಬೇಕಾದರೆ ಮೂಗು ಮುಚ್ಚಿಕೊಂಡು ಕೆಲಸ ಮಾಬೇಕಾಗಿದೆ ಹಳ್ಳದ ನೀರನ್ನು ಸಹ ಬೇಸಾಯಕ್ಕೆ ಉಪಯೋಗಿಸಲು ಆಗುತ್ತಿಲ್ಲ. ಮಲಯುಕ್ತ ತ್ಯಾಜ್ಯದ ಜೊತೆಗೆ ಪಟ್ಟಣದ ಜನ ಶೌಚಾಲಯ ಶುದ್ದೀಕರಣ ಮತ್ತಿತರ ಕಾರಣಗಳಿಂದ ಬಳಕೆ ಮಾಡುವ ರಾಸಾಯನಿಕ ಮಿಶ್ರಿತ ನೀರು ಚರಂಡಿಗಳ ಮೂಲಕ ನೇರವಾಗಿ ಕಾಗುಂಡಿ ಹಳ್ಳಕ್ಕೆ ಬಂದು ಸೇರುತ್ತಿರುವುದರಿಂದ ತಾವು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.