ಜವಳಿ, ಚಿನ್ನಬೆಳ್ಳಿ ವರ್ತಕರು ಹಾಗೂ ಟ್ರಾನ್ಸ್ ಪೋರ್ಟ್ ಮಾಲಿಕರೊಂದಿಗೆ ಸಭೆ, ಜಿ.ಎಸ್.ಟಿ. ನಿಯಮದನ್ವಯ ವ್ಯಾಪಾರ ವಹಿವಾಟು ನಡೆಸಲು ಸೂಚನೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಮಾ.೨೭; ಲೋಕಸಭಾ ಚುನಾವಣೆ ನಡೆಯುತ್ತಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಜವಳಿ, ಚಿನ್ನಬೆಳ್ಳಿ, ಕಿಚನ್ ವಸ್ತುಗಳ ವ್ಯಾಪಾರಿಗಳು ಸೇರಿದಂತೆ ಟ್ರಾನ್ಸ್ ಪೋರ್ಟ್ ಮಾಲಿಕರು ನಿಯಮಬದ್ದವಾಗಿ ವಹಿವಾಟು ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡುವ ಮೂಲಕ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾದ ಚುನಾವಣೆ ನಡೆಸಲು ಎಲ್ಲಾ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.ಅವರು  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಜವಳಿ, ಚಿನ್ನಬೆಳ್ಳಿ, ಸ್ಟೀಲ್ ಅಂಗಡಿ ವರ್ತಕರು, ಪೆಟ್ರೋಲ್ ಬಂಕ್, ಸಮುದಾಯ ಭವನ, ಹೋಟೆಲ್ ಮಾಲಿಕರು ಮತ್ತು ಸರಕು ಸಾಗಣೆ ವಾಹನಗಳ ಮಾಲಿಕರು ಹಾಗೂ ಮುದ್ರಣಾಲಯದ ಮಾಲಿಕರೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆ ನೀಡಲು ವಸ್ತುಗಳನ್ನು ಖರೀದಿ ಮಾಡುವ ಸಂಭವವಿರುತ್ತದೆ. ಸೀರೆ ಹಂಚಿಕೆ, ಕಿಚನ್ ವಸ್ತುಗಳ ಹಂಚಿಕೆ, ಬೆಳ್ಳಿ ಬಂಗಾರದ ಉಡುಗೊರೆ ನೀಡುವ ಸಂಭವಿರುತ್ತದೆ. ಮಾಲಿಕರು ಯಾರು ಒಂದೇ ತರಹದ ವಸ್ತುಗಳನ್ನು ಖರೀದಿಸುವರು ಅಂತಹವರ ವಿವರವನ್ನು ನೀಡಬೇಕಾಗುತ್ತದೆ.ಯಾವುದೇ ವಸ್ತುಗಳನ್ನು ಖರೀದಿಸಿದರೂ ಜಿ.ಎಸ್.ಟಿ. ಬಿಲ್ ನೀಡುವುದು ಕಡ್ಡಾಯವಾಗಿರುತ್ತದೆ. ಯಾವುದೇ ಮದುವೆಯ ಸಮಾರಂಭಕ್ಕೆ ಜವಳಿ ಖರೀದಿಸಿದಲ್ಲಿ ಅದಕ್ಕೆ ಸಂಬಂಧಿಸಿದ ಜಿ.ಎಸ್.ಟಿ. ಬಿಲ್ ಇಟ್ಟುಕೊಳ್ಳಬೇಕಾಗುತ್ತದೆ. ಮತ್ತು ಅಂಗಡಿ ಮಾಲಿಕರು ಆಗಮಿಸುವ ಗ್ರಾಹಕರಿಗೆ ಆನ್‍ಲೈನ್ ವ್ಯವಹಾರ ಮಾಡಲು ತಿಳಿಸಬೇಕು. ಯಾವುದೇ ಅಂಗಡಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಂದಾಗ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆಗೆ ಸಹಕಾರ ನೀಡಬೇಕಾಗುತ್ತದೆ. ನಿಯಮಬದ್ದವಾಗಿ ವ್ಯವಹಾರ ಮಾಡಲು ಯಾವುದೇ ಅಭ್ಯಂತರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.