ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ: ಆರ್.ಉಮೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.27:- ಏಪ್ರಿಲ್ 26 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟಿರುವವರೆಲ್ಲರೂ ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಿ ಎಂದು ಯಳಂದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್. ಉಮೇಶ್ ಅವರು ತಿಳಿಸಿದರು.
ಪಟ್ಟಣ ಪಂಚಾಯಿತಿ, ಕಾಲೇಜು ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಯಳಂದೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ 2024ರ ಹಿನ್ನೆಲೆಯಲ್ಲಿ ಚುನಾವಣಾ ಪರ್ವ- ದೇಶದ ಗರ್ವ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಹಕ್ಕನ್ನು ಹೊಂದಿದ್ದು ತಮ್ಮ ಹಕ್ಕನ್ನು ಚಲಾಯಿಸಿ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಅವಕಾಶವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಪ್ರತಿಯೊಬ್ಬರು ಮತ ಚಲಾಯಿಸಿ ಶೇ. 100ರಷ್ಟು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ನಗರದ ಪ್ರಮುಖ ರಸ್ತೆಗಳಲ್ಲಿ ವೈ.ಎಂ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರು.
ಪಟ್ಟಣದ ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ ಮಾನವ ಸರಪಳಿ ನಿರ್ಮಿಸಲಾಯಿತು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಸ್ಥರಾದ ಮಹೇಶ್‍ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಗುರು ಮಹದೇವ, ಸಹಾಯಕ ನಿರ್ದೇಶಕರಾದ (ಗ್ರಾ,ಉ) ರಾಧಮ, ತಾಲ್ಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕರಾದ ವೆಂಕಟಾಚಲ, ವೈ.ಎಂ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ವಿಜಯ್ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಪೆÇಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.