ಮಹದೇಶ್ವರಬೆಟ್ಟ: 25 ದಿನಗಳಲ್ಲಿ 3 ಕೋಟಿಗೂ ಅಧಿಕ ಹಣ ಸಂಗ್ರಹ
ಸಂಜೆವಾಣಿ ವಾರ್ತೆ
ಹನೂರು ಮಾ 27 :- ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆ ನಡೆದಿದ್ದು 25 ದಿನಗಳ ಅವಧಿಯಲ್ಲಿ ದಾಖಲೆಯ 3.13 ಕೋಟಿ ರೂ. ಹಣ ಸಂಗ್ರಹವಾಗಿದೆ.
ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಿಗ್ಗೆ 8-00 ಗಂಟೆಗೆ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 10-30 ರ ಗಂಟೆಯವರೆಗೂ ನಡೆಯಿತು.
ಈ ಬಾರಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನಗಳ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಬಂದ ಹಣ ಮತ್ತು ಚಿನ್ನ ಹಾಗೂ ಬೆಳ್ಳಿ ರೂಪದ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ. ಹುಂಡಿಗಳ ಎಣಿಕೆಯಲ್ಲಿ 3,13,00,931 ರೂ. ಸಂಗ್ರಹವಾಗಿದೆ. 47 ಗ್ರಾಂ ಚಿನ್ನ ಮತ್ತು 2 ಕೆಜಿ 309 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ನಾಗೇಶ್, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.