ವಿಜೃಂಭಣೆಯ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಜಾತ್ರೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.27- ಜಿಲ್ಲೆಯ ಗಡಿ ಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಜಾತ್ರೆ ಆರಂಭಗೊಂಡಿದ್ದು ಮಂಗಳವಾರ ಬೆಳಗ್ಗೆ ಭಕ್ತಿ ಶ್ರದ್ಧೆಯಿಂದ ಕೊಂಡೊತ್ಸವ ನೆರವೇರಿದೆ.
ಈ ದೇವಾಲಯಕ್ಕೆ ಮಹಿಳೆಯರು ತೆರಳಿದರೇ ಕಲ್ಲಾಗುತ್ತಾರೆ ಎಂಬ ನಂಬಿಕೆ ಇರುವುದರಿಂದ ಹಾಗೂ ಮಹಿಳೆಯರಿಂದ ಅಂತರ ಕಾಯ್ದುಕೊಂಡು ದೇವರು ತಪಸ್ಸಿಗೆ ಕುಳಿತಿರುವ ಐತಿಹ್ಯ ಇರುವ ಈ ದೇವಾಲಯದಲ್ಲಿ ಸಡಗರದಿಂದ ಜಾತ್ರೆ ನಡೆಯುತ್ತಿದೆ.
ಒಂದು ರೀತಿ ಇದು ಪುರುಷ ಭಕ್ತರ ಜಾತ್ರೆ ಇದಾಗಿದ್ದು ಜಾತ್ರೆಗೆ, ದೇವರ ದರ್ಶನಕ್ಕೆ ಮಹಿಳೆಯರ ಪ್ರವೇಶ ಇರುವುದಿಲ್ಲ. ಎರಡು ರಾಜ್ಯಗಳಿಂದ ಕೊಂಗಳ್ಳಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನಸ್ವಾಮಿ ಮಹಾನ್ ತಪಸ್ಸು ಮಾಡಲು ಈ ಪ್ರದೇಶ ಆರಿಸಿಕೊಂಡಿದ್ದರಿಂದ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಊರಿನಲ್ಲಿ ಉತ್ಸವ ನಡೆಯಲಿದ್ದು, ಗ್ರಾಮಕ್ಕೆ ದೇವರ ಉತ್ಸವ ಮೂರ್ತಿ ತೆರಳಿದ ವೇಳೆ ಮಾತ್ರ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವ ವಿಶಿಷ್ಠ ಸಂಪ್ರದಾಯ ಇಲ್ಲಿನದ್ದಾಗಿದೆ.