ದೇವರಿಗೆ ಕೆಂಡದ ನೈವೇದ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.27- ಜಾನಪದ ನಾಡು ಚಾಮರಾಜನಗರವು ವೈವಿಧ್ಯಮಯ ಜಾತ್ರೆ, ಆಚರಣೆಯಿಂದ ಗಮನ ಸೆಳೆಯುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆ, ನಿಗಿನಿಗಿ ಕೆಂಡ ದೇವರಿಗೆ ನೈವೇದ್ಯವಾಗಿ ಅರ್ಪಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಣಹಳ್ಳಿ ಗ್ರಾಮದಲ್ಲಿ ಸತ್ಯವತಿದೇವರ ದೇಗುಲವಿದ್ದು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಕೊಂಡವನ್ನು ಹಾಯುವುದು ಎಲ್ಲೆಡೆ ಸಾಮಾನ್ಯ. ಆದರಿಲ್ಲಿ, ಕೆಂಡವನ್ನು ಬರಿಗೈಯಲ್ಲಿ ಕೊಳಗಕ್ಕೆ ತುಂಬಿ ಬಳಿಕ ಬಿಳಿ ಬಟ್ಟೆಗೆ ಕೆಂಡ ಸುರಿದು ದೇವರಿಗೆ ನೈವೇದ್ಯ ಇಡುವುದು ಇಲ್ಲಿನ ವಿಶೇಷವಾಗಿದೆ.
ರೋಮಾಂಚಕ ಕಾರಿಯಾದ ಈ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಅತೀಂದ್ರಿಯ ಶಕ್ತಿಗೆ ತಲೆ ಬಾಗಿದ್ದಾರೆ. ಬರಿಗೈಯಲ್ಲಿ ಕೆಂಡ ಸುರಿದರೂ ಅರ್ಚಕನ ಕೈ ಸುಡುವುದಿಲ್ಲವಂತೆ, ಬಟ್ಟೆಯ ಜೋಳಿಗೆಗೆ ಏನೂ ಆಗುವುದಿಲ್ಲ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕುವ ಈ ಆಚರಣೆ ಸತ್ಯವತಿ ದೇವರ ಪವಾಡ ಎಂಬುದು ಜನರ ನಂಬಿಕೆಯಾಗಿದೆ.