ದಾಖಲೆ ಇಲ್ಲದ ರೂ.20.35 ಲಕ್ಷ ವಶ
ಚಿತ್ರದುರ್ಗ. ಮಾ.೨೭: ಚಿತ್ರದುರ್ಗ ನಗರದ ಪಿಳ್ಳೇಕೆರನಹಳ್ಳಿ ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ರೂ.20.35 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.ತಾಲ್ಲೂಕಿನ ಭರಮಸಾಗರ ಗ್ರಾಮದ ಮನೋಜ್ ಕುಮಾರ್ ಎಂಬುವವರು ಹೊಸಪೇಟೆಯಿಂದ ಹಣವನ್ನು ಕಾರಿನಲ್ಲಿ ಗ್ರಾಮಕ್ಕೆ ಕೊಂಡಯ್ಯುತ್ತಿದ್ದರು. ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಸ್ಥಾಪಿಸಲಾಗಿರುವ ಪಿಳ್ಳೇಕೆರನಹಳ್ಳಿ ಚೆಕ್ ಪೊಸ್ಟ್ನಲ್ಲಿ ಎಸ್.ಎಸ್.ಟಿ ತಂಡ ತಪಾಸಣೆ ನಡೆಸುವ ವೇಳೆ ಕಾರಿನಲ್ಲಿ ನಗದು ಇರುವುದು ಪತ್ತೆಯಾಗಿದೆ. ಮನೋಜ್ ಕುಮಾರ್ ಅವರು ಹಣ ಹೊಂದಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಪ್ರಸುತ ಪಡಿಸದ ಕಾರಣ, ರೂ.20.35 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಹಣದ ಮೂಲ ಹಾಗೂ ಇನ್ನಿತರ ಮಾಹಿತಿಯ ತನಿಖೆಗಾಗಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ವರ್ಗಾಯಿಸಲಾಗಿದೆ.ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ, ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.