ಪತ್ರಕರ್ತರೊಂದಿಗೆ ಸಂಸದರ ಬಣ್ಣದೋಕುಳಿ
ಕಲಬುರಗಿ:ಮಾ.26: ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಆಚರಿಸಲಾದ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವಿಧ ಬಗೆಯ ಬಣ್ಣಗಳನ್ನು ಒಗ್ಗೂಡಿಸುವಂತೆ ನಾವೆಲ್ಲರೂ ಒಂದು ಎಂಬುದನ್ನು ನಿರೂಪಿಸುತ್ತದೆ ಎಂದರು.
ಚಿಕ್ಕವರಿದ್ದಾಗ ಹೋಳಿ ಹಬ್ಬದ ಸಂಭ್ರವನ್ನು ಬಹಳ ಆನಂದದಿಂದ ಅನುಭವಿಸುತ್ತಿದ್ದೆವು. ಇಂದು ಪತ್ರಕರ್ತರೆಲ್ಲರ ಜತೆ ಹಬ್ಬ ಆಚರಿಸಿರುವುದು ಬಾಲ್ಯ ನೆನಪಿಸುವಂತೆ ಮಾಡಿದೆ ಎಂದು ಅವರು ಹೇಳಿದರು.
ಎಲ್ಲರೂ ಅದರಲ್ಲೂ ಹಿಂದೂಗಳೆಲ್ಲರೂ ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬದ ದಿನದಂದೇ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆ ಇಟ್ಟಿರುವುದು ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಮುಂತಾದವರೆಲ್ಲರೂ ಸೇರಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು, ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮದ ಬಣ್ಣದ ಹಬ್ಬವನ್ನು ಆಚರಿಸಿದರು.