ಟಿಪ್ಪರ್- ದ್ವಿಚಕ್ರವಾಹನ ಡಿಕ್ಕಿ: ಕಾರ್ಮಿಕ ಮುಖಂಡನ ದುರ್ಮರಣ
ಕಲಬುರಗಿ:ಮಾ.26: ಟಿಪ್ಪರ್ ಮತ್ತು ದ್ವಿಚಕ್ರವಾಹನದ ನಡುವೆ ಡಿಕ್ಕಿ ಸಂಭವಿಸಿ ಕಾರ್ಮಿಕ ಮುಖಂಡನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಇವಣಿ- ಗುಂಡಗುರ್ತಿ ರಸ್ತೆ ಮಧ್ಯೆ ವರದಿಯಾಗಿದೆ.
ಮೃತನಿಗೆ ಎಐಸಿಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡ ಹಾಗೂ ಶಹಾಬಾದ್ ನಿವಾಸಿ ಮಲ್ಲಿನಾಥ್ ಮರೆಪ್ಪ ಸಿಂಗೆ(40) ಎಂದು ಗುರುತಿಸಲಾಗಿದೆ.
ಕೋಡ್ಲಾದಿಂದ ನಗರಕ್ಕೆ ದ್ವಿಚಕ್ರವಾಹನದ ಮೇಲೆ ಬರುವಾಗ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಮಾಡಬೂಳ್ ಪೋಲಿಸ್ ಠಾಣೆಯ ಪಿಎಸ್‍ಐ ಅಮೋಜ್ ಕಾಂಬ್ಳೆ, ಸಿಬ್ಬಂದಿಗಳಾದ ಶಿವಶರಣಯ್ಯ, ವೀರಶೆಟ್ಟಿ, ಕಮಲಾಕರ್, ಸಂತೋಷ್ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.