ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಬೆಳೆಸಲು ಕರೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೪: ವಿಶ್ವ ಜಲದಿನಾಚರಣೆಯ ಅಂಗವಾಗಿ ವಿದ್ಯಾನಗರದಲ್ಲಿ ದಿನ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಫಟಕದ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇದೇ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಯರಾಜ್ ಪಾಟೀಲ್, ವಿಶ್ವ ಜಲ ದಿನಾಚರಣೆಯ ಅಂಗವಾಗಿ ಎನ್ ಎಸ್ ಘಟಕದ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕೈದು ಗುಂಡಿಗಳನ್ನು ತೆಗೆದು ಅವುಗಳಲ್ಲಿ ನೀರನ್ನು ತುಂಬಿಸಲಾಗಿದೆ. ಇದಲ್ಲದೆ ರಾಗಿ ಗೋಧಿ, ಜೋಳ ಸೇರಿದಂತೆ ವಿವಿಧ ಧಾನ್ಯಗಳನ್ನು ಹಾಕುವ ಮೂಲಕ ಪಕ್ಷಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅಲ್ಲದೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸವನ್ನು ಮಾಡುತ್ತಿದ್ದೇವೆ.ಎಲ್ಲರೂ ಒಂದಾಗಿ ಈ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಸತೀಶ್ ವಲ್ಲೇಪುರ ಮಾತನಾಡಿ, ಕಾಲೇಜಿನ ಆವರಣವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಜೊತೆಗೆ ಪರಿಸರವನ್ನು ಸ್ವಚ್ಛವಾಗಿಸುವುದು. ಬೇಸಿಗೆ ಕಾಲವಾಗಿದ್ದರಿಂದ ನಮ್ಮ ಕ್ಯಾಂಪಸ್ ನಲ್ಲಿರುವ ನವಿಲು, ಅಳಿಲು ಸೇರಿದಂತೆ ಪಕ್ಷಿ ಪ್ರಾಣಿಗಳಿಗೆ ಅನುಕೂಲವಾಗಲೆಂದು ಕಾಲೇಜಿನ ಕ್ಯಾಂಪಸ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ನೀರನ್ನು ಉಳಿಸುವ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.ದ್ವಿತೀಯ ವರ್ಷದ ಅನ್ವಯಿಕ ಕಲೆಯ ವಿದ್ಯಾರ್ಥಿ ರತನ ದೀಪ ಮಾತನಾಡಿ, ಎನ್ಎಸ್ಎಸ್ ಘಟಕದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಾಣಿಗಳಿಗೆ ಪಕ್ಷಿಗಳಿಗೆ ತೊಂದರೆಯಾಗದಂತೆ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಕುಂಭಗಳಿಗೆ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ ಪಕ್ಷಿಗಳಿಗೆ ಬೇಕಾದ ಕಾಳುಗಳನ್ನು ಹಾಕುವ ಮೂಲಕ ಮಾತು ಬಾರದ ಪಾಣಿಪಕ್ಷಿಗಳಿಗೆ ನಮ್ಮ ಕೈಲಾದ ಸೇವೆ ಮಾಡಲಾಗುತ್ತಿದೆ ಎಂದರು.ಈ ವೇಳೆ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಇದ್ದರು.