ಸಿಎಂಸಿ ವ್ಯವಸ್ಥೆಗೆ ಸದ್ಯದಲ್ಲೇ ಸರ್ಜರಿ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಮಾ.೨೬-
ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಅವಶ್ಯಕತೆ ಇದ್ದು, ಸದ್ಯದಲ್ಲೇ ಕೆಲ ಅಧಿಕಾರಿ ಮತ್ತು ಸಿಬ್ಬಂದಿ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಸಿಎಂಸಿ ನೂತನ ಆಯುಕ್ತ ಛಲಪತಿ ಅವರು ಎಚ್ಚರಿಸಿದ್ದಾರೆ.
ನಗರಸಭೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪ ದೋಷಗಳಿವೆ. ನಗರಸಭೆಗೆ ದೊರೆಯುವ ಅನುದಾನ ಮತ್ತು ಜನತೆಯ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗುತ್ತಿದೆ.
ಯಂತ್ರಗಳು, ವಾಹನಗಳನ್ನು ದುರಸ್ಥಿ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ದುರ್ಬಳಕೆಯಾಗುತ್ತಿದೆ. ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಯನ್ನು ೫ ವರ್ಷಕ್ಕಿಂತಹೆಚ್ಚುಕಾಲ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಬಾರದು. ಅವರು ಎಷ್ಟೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದರೂ ಸಹ ಅಧಿಕಾರಿ ಸಿಬ್ಬಂದಿ ವರ್ಗಾವಣೆ ಅನಿವಾರ್ಯ.
ಪ್ರತಿ ೫ ವರ್ಷಕ್ಕೊಮ್ಮೆಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಮರ್ಪಕ ಕರ್ತವ್ಯ ನಿರ್ವಹಣೆ ಸಾಧ್ಯ ಎಂದು ತಿಳಿಸಿರುವ ಪೌರಾಯುಕ್ತ ಛಲಪತಿ ಅವರು ರಾಯಚೂರು ನಗರಸಭೆ ಆಡಳಿತದ ಜಿಡ್ಡುಕಟ್ಟಿದ ವ್ಯವಸ್ಥೆಗೆ ಸರ್ಜರಿ ಅನಿವಾರ್ಯ ಎಂದು ತಿಳಿಸಿದ್ದಾರೆ.
ನಗರದ ಸ್ವಚ್ಛತೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಸ್ವಚ್ಛತೆ ಮತ್ತು ಕಚೇರಿ ಒಳಗಿನ ಇನ್ನಿತರ ಸಾರ್ವಜನಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳದಿದ್ದರೆ ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.