ಕಾಂಗ್ರೆಸ್ ಸರ್ಕಾರವನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದೇವೆ: ಬಿ.ವೈ. ವಿಜಯೇಂದ್ರ
ಕಲಬುರಗಿ:ಸೆ.18: ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸುವಂತಹ ಕೆಲಸ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಬುಧವಾರ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ ಸಂಬಂಧ ಪಾದಯಾತ್ರೆ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಎಲ್ಲವೂ ದೆಹಲಿಯಲ್ಲಿ ಚರ್ಚೆಯ ಹಂತದಲ್ಲಿದೆ ಎಂದರು. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಗುರಿ ನಮ್ಮ ಮುಂದಿದೆ. ಅದನ್ನು ಇನ್ನೂ ಚುರುಕುಗೊಳಿಸಬೇಕಿದೆ. ಮುಂದಿನ ಸುಮಾರು ಒಂದೂವರೆ ತಿಂಗಳ ಕಾಲ ಸದಸ್ಯತ್ವ ಅಭಿಯಾನದಲ್ಲಿ ನಮ್ಮ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರಾಗಿ ತಮ್ಮನ್ನು (ವಿಜಯೇಂದ್ರನನ್ನು) ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ಅದನ್ನು ಸ್ವಾಗತ ಮಾಡುತ್ತೇನೆ. ನಾನು ನಾಯಕ ಎಂದು ಹೊರಟಿಲ್ಲ, ನಮ್ಮ ಪಕ್ಷದ ವರಿಷ್ಠರು, ಹಿರಿಯರು ನನ್ನನ್ನು ರಾಜ್ಯಾಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ರಾಜ್ಯಾಧ್ಯಕ್ಷನಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲಿಸುವ ಕೆಲಸವನ್ನು ಬೆಂಗಳೂರು- ಮೈಸೂರು ಪಾದಯಾತ್ರೆ ಮೂಲಕ ಯಶಸ್ವಿಯಾಗಿ ಮಾಡಿದ್ದೇವೆ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಅವರ ಬಾಯಲ್ಲಿ ಪಕ್ಷ, ಪಕ್ಷದ ಸಿದ್ಧಾಂತದ ವಿಚಾರ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ ಅವರು, ಶಿಕಾರಿಪುರದ ಗೆಲುವು ಕಾಂಗ್ರೆಸ್ ಕೊಡುಗೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿಲ್ಲ ಎಂದು ಯತ್ನಾಳ್ ಅವರ ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದರು. ತಂದೆಯವರಾದ ಯಡಿಯೂರಪ್ಪನವರು ಒಂದು ಮಾತನ್ನು ಹೇಳುತ್ತಿರುತ್ತಾರೆ. ಮಾತನಾಡುವುದೇ ಸಾಧನೆ ಆಗಬಾರದು; ಸಾಧನೆ ಮಾತನಾಡಬೇಕು ಎಂಬುದು ಅವರ ಕಿವಿಮಾತು. ಬೆಂಗಳೂರು ಇವರದೇ ಸಾಮ್ರಾಜ್ಯ ಎಂದು ಮೆರೆಯುತ್ತಿದ್ದರು. ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದೇವೆ. ನಾನು ಮಾತನಾಡುವ ವ್ಯಕ್ತಿಯಲ್ಲ; ಕೆಲಸ ಮಾಡಿ ತೋರಿಸುವೆ ಎಂದು ಗುಡುಗಿದರು.