ಹೋಳಿ ಹಬ್ಬದ ಅಂಗವಾಗಿ ರಾರಾವಿ ಗ್ರಾಮದಲ್ಲಿ: ಜಾನಪದ ಲೋಕ ಅನಾವರಣ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ.26: ತಾಲೂಕಿನ ರಾರಾವಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಜಾನಪದ ಲೋಕ ಅನಾವರಣಗೊಂಡಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲಿ ಎಲ್ಲೆಲ್ಲೂ ಜಾನಪದ ಹಾಡು, ಕುಣಿತ. ಗೆಜ್ಜೆಸದ್ದು, ತಮಟೆ ನಾದ ಕೇಳಿಬಂದಿತು.
ಗ್ರಾಮದ ಅಗಸಿ ಮೇಲಿನವರು ಪ್ರದರ್ಶಿಸುವ ಗೆಜ್ಜೆಕುಣಿತ ನೋಡಲು ತುಂಬ ವಿಶೇಷವಾಗಿದ್ದು, ಮಕ್ಕಳು, ಯುವಕರು ಕೊಡೆಗಳನ್ನು ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೋಳಿಯ ಹಾಡುಗಳಿಗೆ ಹೆಜ್ಜೆ ಹಾಕಿದರು. ವಿವಿಧ ಜಾನಪದ ಸಂಪ್ರದಾಯಗಳಲ್ಲಿ ಕಂಡುಬರುವ ಅಲೆಮಾರಿಗಳ ಭಿಕ್ಷಾಟನೆ, ಬುಡಬುಡಿಕೆ, ವೇಷಗಾರರು, ಕಳ್ಳ ಪೊಲೀಸ್ ವೇಷ, ದಾಸರ ವೇಷ, ಮುಳ್ಳಾವಿಗೆ ಅಯ್ಯನವರ ವೇಷ, ಜೊಗಮ್ಮನವರ ವೇಷ, ಕಾಡುಪಾಪರ ವೇಷ, ಮೊಂಡರ ವೇಷ, ಬುಡ್ಗ ಜಂಗಮರ ವೇಷ, ಕೊಡೆಕಲ್ಲು ಬಸವಣ್ಣನವರ ವೇಷ ತೊಟ್ಟ ಯುವಕರ ತಂಡವು ಗ್ರಾಮದ ಮನೆ ಮನೆಗಳಿಗೆ ತೆರಳಿ ದವಸ ಧಾನ್ಯ, ಕಾಣಿಕೆಗಳನ್ನು ಸಂಗ್ರಹಿಸಿದರು.
ಮಹಿಳೆಯರ ವೇಷತೊಟ್ಟ ಯುವಕರು ಹೆಂಗಳೆಯರನ್ನು ನಾಚಿಸುವಂತೆ ವಿವಿಧ ಆಭರಣಗಳು, ಉಡುಪುಗಳನ್ನು ತೊಟ್ಟು ರಸ್ತೆಗೆ ಬರುತ್ತಿದ್ದಂತೆ ಗ್ರಾಮದ ರಸ್ತೆಗಳಲ್ಲಿ ವಿಶೇಷ ಕಳೆ ಬರುತ್ತದೆ. ಕಾಮಣ್ಣನ ಮಕ್ಕಳು ಕಳ್ಳಸುಳ್ಳ ಮಕ್ಕಳು ಎನ್ನುತ್ತಾ ಯುವಕರು ಮಠದಲ್ಲಿರುವ ರತಿ ಮನ್ಮಥರ ದರ್ಶನ ಮಾಡಿಕೊಂಡು ಪೂಜೆ ಸಲ್ಲಿಸಿದರು.
ಕಳ್ಳಬೇಡರ ವೇಷ ಧರಿಸಿದ ಮಕ್ಕಳು ಅಗಸೆಯಲ್ಲಿರುವ ಬುಡ್ಡೆಕಲ್ಲಿಗೆ ಪೂಜೆ ಸಲ್ಲಿಸಿ ಬುಡ್ಡೆಕಲ್ಲಿನ ಸುತ್ತಲು ಜಾನಪದ ಹಾಡುಗಳನ್ನು ಹಾಡುತ್ತಾ ಕುಣಿದರು.  ತಮಟೆಯ ವಿವಿಧ ಮಜಲುಗಳಿಗೆ ವೇಷತೊಟ್ಟ ಯುವಕರು ಹುರುಪಿನಿಂದ ಹೆಜ್ಜೆಹಾಕಿ ಕುಣಿದು ಜಾನಪದ ಲೋಕವನ್ನು ಅನಾವರಣ ಮಾಡಿದರು. ಈ ಕಾರ್ಯಕ್ರಮ ನೋಡಲು ವಿವಿಧ ಗ್ರಾಮಗಳಿಂದ ಸಾವಿರಾರು ಜನ ಆಗಮಿಸಿದ್ದರು.