ಕುಡಿಯುವ ನೀರಿಗೆ ಸ್ಪಂದಿಸಿದ ಸರ್ಕಾರ. ಭದ್ರಾದಿಂದ ತುಂಗಭದ್ರಾಕ್ಕೆ ನೀರು ಬಿಡಲು ಚರ್ಚೆ, ನಿರ್ಣಯ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.26 :- ತುಂಗಭದ್ರಾ ಹಿನ್ನಿರಿನಿಂದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಹಾಗೂ ಕೂಡ್ಲಿಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಸಕಾಲಕ್ಕೆ ಮಳೆ ಬಾರದೆ ತೀವ್ರ ಬರ ಆವರಿಸಿ ಇರುವ ನೀರು ಬಿಸಿಲಿನ ಭವಣೆಗೆ ಬತ್ತಿಹೋಗುತ್ತಿದ್ದೂ ಕುಡಿಯುವ ನೀರಿನ ಅಭಾವ ಉಂಟಾಗಿ ಜನರು ಕುಡಿಯುವ  ನೀರಿಗಾಗಿ ಪರೀತಪಿಸುವುದನ್ನು ಅರಿತ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ಅವರು ಸಂಬಂದಿಸಿದ ಇಲಾಖೆಗಳಿಗೆ ಪತ್ರ ವ್ಯವಹಾರ ನಡೆಸಿದ್ದು ಅಲ್ಲದೆ ಸರ್ಕಾರದ ಸಂಬಂದಿಸಿದ ಮಂತ್ರಿ ಮಹೋದಯರನ್ನು ಸಹ ಬೆನ್ನತ್ತಿದ್ದರಿಂದ ಸ್ಪಂದಿಸಿದ ಮಂತ್ರಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿ ಭದ್ರಾ ದಿಂದ ತುಂಗಭದ್ರಾಕ್ಕೆ ನೀರು ಬಿಡಲು ಸಮ್ಮತಿ ದೊರೆತಿದ್ದು ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ಎರಡು ಟಿಎಂಸಿ ನೀರು ಬಿಡಲು ಸಭೆಯಲ್ಲಿ ನಿರ್ಣಹಿಸಿದ್ದಾರೆ ಎಂದು ತಿಳಿದಿದೆ.
ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ಪತ್ರ ವ್ಯವಹಾರ ನಡೆಸಿದಂತೆ  ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಕುಡಿಯುವ ಉಪಯೋಗಕ್ಕಾಗಿ 3ಟಿಎಂಸಿ ನೀರನ್ನು ಬಿಡುಗಡೆಗೊಳಿಸುವ ಬಗ್ಗೆ ಕೆಳಗಿನಂತೆ ಮನವಿ ಮಾಡಲಾಗಿ ವಿಜಯನಗರ ಜಿಲ್ಲೆಯ  ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವು ಡಾ.ನಂಜುಂಡಪ್ಪರವರ ವರದಿಯ ಪ್ರಕಾರ 39 ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಕೂಡ್ಲಿಗಿ ತಾಲೂಕು ಸಹ ಒಳಗೊಂಡಿದೆ. ಹಾಗೂ ಭೀಕರ ಬರಗಾಲಕ್ಕೆ ಒಳಗಾದ ಕ್ಷೇತ್ರವಾಗಿದೆ. ಸದರಿ ಕ್ಷೇತ್ರದಲ್ಲಿ ಯಾವುದೇ ನೀರಿನಸಂಪನ್ಮೂಲ ಇರುವುದಿಲ್ಲ. ಪ್ರಸ್ತುತ ಕೂಡ್ಲಿಗಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ, ಪಟ್ಟಣಗಳಿಗೆ ಜಂಟಿ ಕುಡಿಯುವ ನೀರಿನ ಯೋಜನೆಯು ಚಾಲ್ತಿಯಲ್ಲಿದ್ದು, ಸದ್ಯ ತುಂಗಾಭದ್ರಡ್ಯಾಂ ಹಿನ್ನೀರಿನ ಪ್ರದೇಶದಿಂದ ಬನ್ನಿಗೋಳ ಹತ್ತಿರವಿರುವ ಮೂಲ ಸ್ಥಾವರದಿಂದ ಮೂರು ಪಟ್ಟಣಗಳಿಗೆ ಸುಮಾರು 1 ಲಕ್ಷ ಜನಸಂಖ್ಯೆಗೆ ಕನಿಷ್ಟ ಪ್ರತಿ ದಿನಕ್ಕೆ 10ಎಮ್‌ಎಲ್ (Million liters) ನಂತೆ ಕುಡಿಯುವ ನೀರು ಅವಶ್ಯವಿರುತ್ತದೆ ಆದರೆ ಸದರಿ ಸ್ಥಳದಲ್ಲಿ ಸದ್ಯ ನೀರು ಇಲ್ಲದ ಕಾರಣ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಿಂಗಟಾಲೂರು ಬ್ಯಾರೇಜ್‌ನಿಂದ ಸುಮಾರು 300 ಕ್ಯೂಸೆಕ್ಸ್ ನೀರನ್ನು ಸಿಂಗಟಾಲೂರು ಬ್ಯಾರೇಜ್‌ನಿಂದ ಬನ್ನಿಗೋಳ ಜಾಕ್‌ವೆಲ್‌ಗೆ ಸೆರುವಂತೆ ನೀರು ಬಿಡುಗಡೆಗೊಳಿಸಿದರೆ ಸುಮಾರು 45 ದಿನಗಳ ವರೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ.ಪ್ರಸ್ತುತ ಸಿಂಗಟಾಲೂರು ಬ್ಯಾರೇಜ್ ನಲ್ಲಿ 0.55 ಟಿಎಂಸಿ ನೀರುಇದ್ದು, 0.4 ಟಿಎಂಸಿ ಡೆಡ್ ಸ್ಟೋರೇಜ್ ವರತು ಪಡಿಸಿ ಉಳಿದ 0.15 ಟಿಎಂಸಿ ನೀರನ್ನು ತುಂಗಾಭದ್ರಡ್ಯಾಂ ಗೆ ನೀರು ಬಿಡಲು ಮಾನ್ಯ ಜಿಲ್ಲಾಧಿಕಾರಿಗಳು ಗದಗ ಜಿಲ್ಲೆ ಇವರುಸಮ್ಮತಿ ನೀಡುತ್ತಿಲ್ಲ. ಆದ್ದರಿಂದ ತುಂಗಾಭದ್ರಡ್ಯಾಂ ಗೆ ಭದ್ರಾ ಜಲಾಶಯದಿಂದ ಸುಮಾರು 3 ಟಿಎಂಸಿ ನೀರನ್ನು ಬಿಡುಗಡೆಗೊಳಿಸಿದರೆ, ವಿಜಯನಗರ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಅಲ್ಪಮಟ್ಟಿಗೆ ಪರಿಹಾರವಾಗುತ್ತದೆ. ಹಾಗೂ ಕೂಡ್ಲಿಗಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಗೆ ನೀರು ಒದಗಿಸಿ ಮೂರು ಪಟ್ಟಣಗಳ ಕುಡಿಯುವ ನೀರಿನ ಭವಣೆ ತಪ್ಪಿಸಬೇಕೆಂದು ಈ ಮೂಲಕ ಪತ್ರ ವ್ಯವಹಾರವನ್ನು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ನಡೆಸುವ ಜೊತೆಗೆ ಸಿಎಂ, ಡಿಸಿಎಂ ಹಾಗೂ ಸಂಬಂದಿಸಿದ ಇಲಾಖೆಯ ಅಧಿಕಾರಿಗಳ ಬೆನ್ನತ್ತಿದ್ದರಿಂದ ಸ್ಪಂದನೆ ನೀಡಿದ ಅಧಿಕಾರಿಗಳು ವಿಡಿಯೋ ಕನ್ಫ್ಯೂರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.
ಅಧಿಕಾರ ಸಭೆ, ಚರ್ಚೆ, ನಿರ್ಣಯ :ಅಪರ ಮುಖ್ಯ ಕಾರ್ಯದರ್ಶಿಗಳು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಮೈಸೂರು  ಪ್ರಾದೇಶಿಕ ಆಯುಕ್ತರಿಗೆ ಪತ್ರ ವ್ಯವಹಾರದ ಮೂಲಕ ಸೂಚನೆ ನೀಡಿದಂತೆ ಇದೇ ಮಾರ್ಚ್ 21ರಂದು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ಇವರ ಉಪಸ್ಥಿತಿಯಲ್ಲಿ ಭದ್ರಾ ಜಲಾಶಯದ ಯೋಜನಾ ಅಧಿಕಾರಿಗಳು ಮತ್ತು ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ದಾವಣಗೆರೆ, ಗದಗ, ಹಾವೇರಿ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿ, ಭದ್ರಾ ಜಲಾಶಯದಿಂದ ಮಾರ್ಚ್ :29 ರಿಂದ ಏಪ್ರಿಲ್  6 ರವರೆಗೆ ಒಟ್ಟಾರೆ 2.00 ಟಿ.ಎಂ.ಸಿ. ನೀರನ್ನು ತುಂಗಭದ್ರಾ ನದಿಗೆ ಹರಿಸಲು ನಿರ್ಣಯಿಸಲಾಗಿರುತ್ತದೆ.
ಸೂಚನೆ : ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ನೀರಿನ ಲಭ್ಯತೆ ಗಣನೀಯವಾಗಿ ಕಡಿಮೆಯಿದ್ದು, ಲಭ್ಯವಿರುವ ನೀರನ್ನು ಮಿತವ್ಯಯ ಸಾಧಿಸಿ, ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ, ಭದ್ರಾ ಜಲಾಶಯದಿಂದ ನೀರನ್ನು ನದಿಪಾತ್ರಕ್ಕೆ ಹರಿಸಿದಾಗ ನಿಗದಿತ ಸ್ಥಳವನ್ನು ನೀರು ತಲುಪಲು ಅನುವಾಗುವಂತೆ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿನ ನದಿಪಾತ್ರದಲ್ಲಿ ಬರುವ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು, ಅವುಗಳಿಗೆ ಕಲ್ಪಿಸಲಾದ ವಿದ್ಯುತ್ ಸಂಪರ್ಕಗಳನ್ನು ಸಹ ಕಡಿತಗೊಳಿಸಲು ಹಾಗೂ ನದಿಪಾತ್ರದಲ್ಲಿ ನಿರ್ಮಿಸಿರುವ ಅನಧಿಕೃತ ಮಣ್ಣಿನ ಏರಿಗಳನ್ನು ತೆರವುಗೊಳಿಸಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಸಂಬಂಧಿಸಿದ ಜಿಲ್ಲಾಡಳಿತಕ್ಕೆ ಸೂಚನೆ ನೀಡಲು ಕೋರಲಾಗಿದೆ.