ಪಕ್ಷಾಂತರ ಪರ್ವಕ್ಕೆ ವೇದಿಕೆ ಸಜ್ಜು
ಸಂಜೆವಾಣಿ ನ್ಯೂಸ್
ಮೈಸೂರು: ಮಾ.26:- ಸಿಎಂ ತವರು ಜಿಲ್ಲೆಯಲ್ಲಿ ದಿನೇ ದಿನೇ ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಈ ಮಧ್ಯೆ ಸಿಎಂ ನೇತೃತ್ವದಲ್ಲಿಯೇ ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆಯಲು ವೇದಿಕೆ ಸಿದ್ಧಗೊಂಡಿದೆ.
ಮೈಸೂರಿನಲ್ಲಿ ತಮ್ಮದೇ ರಾಜಕೀಯ ಮಾಸ್ಟರ್ ಪ್ಲಾನ್ ನಡೆಸಿರುವ ಸಿಎಂ ಸಿದ್ದರಾಮಯ್ಯ ಈ ಬಾರಿ ಶತಾಯಗತಾಯ ಮೈಸೂರು, ಮಂಡ್ಯ, ಚಾಮರಾಜನಗರ ಗೆಲುವಿಗೆ ಪಣ ತೊಟ್ಟಿದ್ದಾರೆ. ಇದರ ಮೊದಲ ಭಾಗವಾಗಿ ಅತಿ ಹೆಚ್ಚು ಬಿಜೆಪಿಗೆ ಮತ ನೀಡುವ ಕೃಷ್ಣರಾಜ ಕ್ಷೇತ್ರದಲ್ಲೇ ಬಿಜೆಪಿ ಅಸಮಾಧಾನಿತರ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿದ್ದ ಹಾಗೂ ಸ್ವಚ್ಛ ಮೈಸೂರು ಕಾರ್ಯಕ್ರಮಗಳ ಮೂಲಕ ಮೋದಿಯವರ ಮನಗೆದ್ದಿದ್ದ ಎಚ್.ವಿ.ರಾಜೀವ್ ಕಾಂಗ್ರೆಸ್ ಕೈ ಹಿಡಿಯಲು ಮುಂದಾಗಿದ್ದಾರೆ. ಇವರೊಟ್ಟಿಗೆ ಕೃಷ್ಣರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿದ್ದ ಜೆಡಿಎಸ್ ಕಟ್ಟಾಳು ಕೆ.ವಿ.ಮಲ್ಲೇಶ್, ಮಾಜಿ ಮೇಯರ್ ಎಸ್.ಎಲ್.ಬೈರಪ್ಪ, ಜಿಪಂ ಮಾಜಿ ಸದಸ್ಯ ಸದಾನಂದ ಸೇರಿ ಹಲವು ನಗರಪಾಲಿಕೆ, ಜಿಪಂ ಮಾಜಿ ಸದಸ್ಯರು ಕಾಂಗ್ರೆಸ್ ಸೇರಲು ವೇದಿಕೆ ಕಾರ್ಯಕ್ರಮ ಸಿದ್ದತೆ ನಡೆದಿದೆ.
ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅನೇಕ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವೇದಿಕ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಎಲ್ಲರೂ ಚರ್ಚಿಸಿದರು.
ಲಿಂಗಾಯಿತ, ಬ್ರಾಹ್ಮಣ ಮತಕ್ಕೆ ಕೈ ಗಾಳ
ಎಚ್.ವಿ.ರಾಜೀವ್ ಬ್ರಾಹ್ಮಣ ಸಮುದಾಯಕ್ಕ ಸೇರಿದವರಾಗಿದ್ದು, ಕೆ.ವಿ.ಮಲ್ಲೇಶ್ ಲಿಂಗಾಯತ ಸಮುದಾಯದವರಾಗಿದ್ದು ಇವರ ಮೂಲಕ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದು ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುದು ಕಾದು ನೋಡಬೇಕಿದೆ.