ತೊಡೆಯಿಂದ ಎದ್ದ ಕನಸುಗಳ ಚಿತ್ತಾರ ಈ ಕೌದಿ
ಬಳ್ಳಾರಿ, ಮಾ.26: ತೊಡೆಯಿಂದ ಎದ್ದ ಕನಸುಗಳ ಚಿತ್ತಾರ ಈ ಕೌದಿ, ನಾನೊಂದು ಕೌದಿ ಮುಗಿಲೊಂದೆ ಅಲ್ಲ ಆಯಿ. ತೊಡೆಯಿಂದ ಎದ್ದ ಕನಸುಗಳ ಚಿತ್ತಾರ ಈ ಕೌದಿ, ತಂಪಿಗೆ ಬೆಚ್ಚಾಗುಗುವ ದಗೆಗೆ ತಂಪಾಗುವ
ಮೈಯ ತುಂಬಾ ಸಾವಿರದೆಂಡು ಗಂಟುಗಳ, ಪೋಣಿಸುತ್ತಾ ಪೆಚ್ಚಾದೆ.. ಹುಚ್ಚಾದೆ …ಎಂಬ ಹಾಡಿನೊಂದಿಗೆ ಪ್ರಾರಂಭವಾಗುವ ಕೌದಿ ನಾಟಕ  ಏಕವ್ಯಕ್ತಿ ಪ್ರದರ್ಶನವಾಗಿದ್ದು ಇಡೀ ಕಥೆಯನ್ನು ಒಂದು ಪಾತ್ರವೇ ನಿರೂಪಿಸುತ್ತಾ ಅಭಿನಯಿಸುತ್ತಾ ಹೋಗುವ ಕಲಾ ಪ್ರಕಾರವಾಗಿದೆ. ಕೌದಿ ಹೊಲಿದ ಕೊಡುತೇವವ್ವಾ ಕೌದಿ ಹೋಲಿದು ಕೊಡುತೀವಿ ನಿಮ್ಮ ಹಳೀ ಅರಿವಿ ಇದ್ರ ನಮಗ ಕೊಡ್ರಿ  ಅದಕ ದಾರ ಹಾಕಿ ಹೊಲದು ಗಾದಿ ಮಾಡಿ ಕೊಡ್ತೀವಿ..ಎಂದು ಕೇಳುತ್ತಾ ಬಂದ ಹೆಣ್ಣು ಮಗಳೊಬ್ಬಳಿಗೆ ಯಾರು ಕೌದಿ ಹೊಲದುಕೊಡು ಅಂತ ಕರೆದೇ ಇದ್ದಾಗ ನಿರಾಶೆಯಾಗುವುದು. ಆಗ ಆಕೆ ಕುರ್ಲಾನ್ ಬೆಡ್  ಉಲ್ಲನ್ ಶಾಲು ಒದ್ದು ಮಲಗೋ ಮಂದೀಗೆ ಕೌದಿ ಸಂಪತ್ತು ಏನ್ ಗೊತ್ತು ಅದೇನೋ ಅಂತಾರಲ್ಲ ಬಲ್ಲವನೇ ಬಲ್ಲ ಬೆಲ್ಲದ ಸವಿ  ಹಾಂಗ ಕೌದಿ ಮ್ಯಾಲಾ ಮಲಗದವಗ ಮಾತ್ರ ಗೊತ್ತು ಅದರ ಗತ್ತು  ಗಮ್ಮತ್ತು .. ಮಲಗಲಾರದವಗೇನು ಗೊತ್ತು ಕೌದಿ ಕಿಮ್ಮತ್ತು..ಕೌದಿ ಅಂದರ ಅದು ಹಳೇ ಅರಿವಿ ಗಾದಿ ಅಲ್ಲ, ಕಳೆದುಕೊಂಡ ಬದುಕಿನ ಮೆಲಕು ..ದುಡಿದು ದಣಿದವರ ಬದುಕಿನ ಚಿತ್ತಾರ ..ಹೀಗೆ ಕೌದಿಯ ಬಹಿರಂಗದ ಕಥೆಯನ್ನು ಹೇಳುತ್ತಲೇ ಕೌದಿಯ ಹಾಗೂ ಅದ ಹೊಲೆಯುವವರ ಅಂತರಂಗದಲ್ಲಡಗಿದ ನೋವುಗಳನ್ನ  ತನ್ನ ಆತ್ಮ ಕಥೆಯ ರೂಪದಲಿ ಬಿಚ್ಚಿಡುತ್ತಾ ಹೋಗುತ್ತಾಳೆ….
@12bc = ಕೌದಿಯೊಳಗಿನ ಕಥೆಯ ವ್ಯಥೆ.
ಕೌದಿ ಹೊಲಿಯುವ ನಾವು ಅಲೆಮಾರಿ ಜನಾಂಗದವರು, ಗಂಡಸ್ ಮಕ್ಳು ಬುಡುಬುಡಿಕೆ ವೇಷ ಹಾಕೋದು ಭವಿಷ್ಯ ಹೇಳೋದು ಪಾತ್ರ ಪಗಡಿ ಮಾರೋದ ಮಾಡಿದ್ರ ನಾವು ಹೆಂಗಸೂರು ಕೌದಿ ಹೊಲಿತೀವಿ ..ಮನಿ ಮನಿ ತಿರಿಗಿ ಹಳಿ ಅರವಿ ತಂದು ಅವನ್ನು ಕತ್ತರಿಸಿ ಜೋಡಿಸಿ ಗೇಣಿಗೊಂದು ಚೋಟುಗೊಂದು ದಾರ ಹಾಕಿ ಹೊಲದು ದಪ್ಪನೆಯ ಕೌದಿ ಮಾಡತೀವಿ ..ಬಣ್ಣದ ಬಣ್ದದ ಅರಿವಿ ಕೂಡಿಸಿ ಚಿತ್ತಾರದ ಕೌದಿ ಹೊಲಿತೀವಿ ..ಇದು ಬ್ಯಾಸಗಿ ಕಾಲಕ್ಕ ತಂಪು ಕೊಡತೈತಿ ಚಳಿಗಾಲಕ್ಕ ಬೆಚ್ಚಗಿರತೈತಿ.. ಕೌದಿ  ಹೊದ್ದು ಮಲಗಿದರ ಸತ್ತ ಹೋದ ಆಯೀ ಮತ್ತ ಬಂದ ನಿಮ್ಮನ್ನು ತಬ್ಬಿಕೊಂಡಾಗ ಅಕೈತಿ ..ಹುಟ್ಟಿದ ಕೂಸುನ ಕೌದ್ಯಾಗ ಹಾಕ್ತಾರ  ಅದನ್ನು ತೊಟ್ಟಿಲ ಕೌದಿ ಅಂತಾರ ,ಸತ್ತವರನ್ನು ಇದಾ ಕೌದಿಗೆ ಹಾಕಿ ಹೊತ್ಕೊಂಡ ಹೊಕ್ಕಾರ ಹಂಗಾಗಿ ಹುಟ್ಟಿನಿಂದ ಚಟ್ಟದ ತನಕ ನಾನು ಬೇಕೆ ಬೇಕು ..ಸತ್ತವರನ ಹೊತ್ತಕೊಂಡು ಹೋಗುತ್ತಿದ್ದ ನನಗ  ಈಗ ಸಾಯೋ ಹೊತ್ತ ಬಂದಾದ ಯಾಕಂದ್ರ ನನ್ನ ಯಾರು ಬಳಸಾವಲ್ಲರು ಎಲ್ರೂ ಕುರ್ಲಾನ್  ಬೆಡ್ಡು ಉಲ್ಲನ್ ರಗ್ಗಿನ ಸೆಳೆತಕ್ಕೆ ಸಿಕ್ಕಿ ನನ್ನ ಮರತಾರ ನಾನು ಈಗ ಇತಿಹಾಸದ ಪುಟಕ್ಕೆ ಸೇರಿನಿ..ನನ್ನ ಹಳೇದಿನಗಳನ್ನ ನೆನಸ್ಕಂಡ್ರ ನನ್ನ ವೈಭವದ ದಿನಗಳು ನೆನಪಾಕವ. ಚಿತ್ತಾರದ ರೂಪದಲ್ಲಿ ಬಣ್ಣದ ಬಣದ, ರೂಪದಲ್ಲಿ ತಯಾರಾಗತ್ತಿದ್ದೆ. ನೂರಾರು ಹೆಣ್ಣು ಮಕ್ಕಳು ಬಯಲಾಗು ಕೂತು ಅಡಿಕಿ ಎಲಿ ತಿನಕೊತ ನನಗ ತರತರದ ರೂಪು ಕೊಡುತಿದ್ದರು ..ನನ್ನ ತಯಾರಿಕೆಗೆ ಗಜಕಿಷ್ಟು ಮೊಳಕ್ಕಿಷ್ಟು ಅಂತ ರೊಕ್ಕ ನಿಗದಿ ಅಗಿತ್ತು.. ಕೆಲವು ಮಂದಿ ಹೆಣ್ಣು ಮಕಳು ಇದಾ ಕೆಲಸ ಮಾಡಿ ಬೋರಮಳ ಸರಾನು ಮಾಡಸಿಕೊಂಡರು ಕೆಲವರು ತಮ್ಮ ಮಕ್ಕಳ ಮದುವೆ ಮಾಡಿದ್ರು  ಮುಂಜೇನಿಂದ ಸಂಜಿ ತನ ಕೌದಿ ಹೊಲದ್ರೂ ಕೈ ಬ್ಯಾನಿ ಬರಲಿಲ್ಲ ಅದಕ್ಕೆಲ್ಲಾ ಹುಬ್ಳಳ್ಳಿ ಸಿದ್ದಾರೂಡರ ದಯೆ.ನಾನು ಬಯಲು ಗಳಿಕೆಯ ಬೆಳಗಾಗಿದ್ದೆ ಬದುಕಿನ ಅವಿಭಾಜ್ಯ ಅಂಗವಾಗಿದ್ದೆ  ಬಾಳಿಗೆ ಚೈತನ್ಯ ತುಂಬುವ ಯುಗಾದಿ ಆಗಿದ್ದೆ ಆದರೆ ಈಗ ಬಯಲಲ್ಲಿ ಬಯಲಾಗಿ ಹೋದೆ…ನನ್ನನ್ನೇ ನಂಬಿದ ಜನ ಇಂದು ಬೀದಿ ಪಾಲಾದರೂ ಊರೂರು  ಮನಿ ಮನಿ ತಿರುಗಿ ಕೇಳಿದ್ರು ಒಬ್ಬರು ಕೌದಿ ಹೊಲಸವಲ್ಲರು ಕೌದಿ ಹೊಲ್ಯಾದು ಬಿಟ್ಟು ಬ್ಯಾರ ಉದ್ಯೋಗ ಮಾಡಕ ಬಂಡವಾಳ ಇಲ್ಲ ಬ್ಯಾಂಕ್ ಇವರಿಗೆ ಸಾಲ ಕೊಡವಲ್ದು ಸರ್ಕಾರ ಇವರಿಗೆ ಪರಿಹಾರ ಕೊಡವಲ್ದು ಅಂಗಾಗಿ ಚಿಂದಿ ಚಿಂದಿ ಸೇರಿಸಿ ಕೌದಿ ಹೊಲಿಯುವವರ ಬದುಕು ಚಿಂದಿ ಚಿಂದಿಯಾಗಿಧೆ ಎನ್ನುತ್ತಾ ಕೌದಿ ತನ್ನೊಳಗೆ ತಾನು ಹೂತು ಕೊಳ್ಳುತ್ತದೆ.
ನಾಟಕದ ಯಶಸ್ಸು
ಈ ನಾಟಕದ ಯಶಸ್ಸಿನ ರಹಸ್ಯವಿರುವುದೇ ಸಂಭಾಷಣೆಯಲ್ಲಿ ಗಣೇಶ ಅಮ್ಮಿನಗಡ ರವರು ಈ ಕಥೆಗೆ ತುಂಬಾ ಸೊಗಸಾದ ಮತ್ತು ಅರ್ಥಪೂರ್ಣವದ ಸಂಭಾಷಣೆ ರಚಿಸಿದ್ದಾರೆ.ಸಂಭಾಷಣೆಯ ಕೆಲವು ಉದಾಹರಣೆಗಳನ್ನು ಗಮನಿಸಿ ‘ಕೂಡಿ ಬಾಳಿದ ಪದ್ಧತಿ ನಮ್ಮದು ಎಲಿ ಅಡಿಕೆ ಹಾಕೋತಾ ಕಷ್ಟ ಸುಖ ಹಂಚಿಕೊತ್ತಿದ್ದೆವು ಬೆಳಗ್ಗಿನ ಜಾವ 8 ರಿಂದ ಸಾಯಂಕಾಲ 5 ರವರಗೆ ಮರದ ನೆರಳಿಗೆ ಕೂತು ಕೌದಿ ಹೊಲಿತೀವಿ ಬಯಲಾಗ ಕೂತು ಒಂದಿನ ಬಯಲಾಗಿ ಹೋಗುತ್ತೀವಿ.ಹಳಿ ಕೌದಿ ಹಾಸಿ ಹೊಸ ಕೌದಿ ಹೊದ್ದು ಮಲಗಿದರ ಅವ್ವ ಅಜ್ಜಿ ಎಲ್ಲಾ ನೆನಪಾಗ್ತಾರ .ಕೌದಿ ಹೊಲಿಯಾಕ  ನಾಕೂರು ನನಗಿರಿಲಿ ನಾಕೂರು ನಿನಗಿರಲಿ ಅಂತ ಊರು ಹಂಚಿಕೋತಿದ್ದಿವಿ.. ಬಡತನದ ಬಾಳೇವು ಅತ್ತಿ ಮಾವಾಗ ಅಂಜುತ್ತಿದ್ದಿವಿ ಅತ್ತಿ ಸೊಸೆ ಅಂದರ ತಾಯಿ ಮಕ್ಕಳ ತರ ಇದ್ದಿವಿ .ಕೌದಿ ಹೊಲದರ ನಾಕು ದುಡ್ಡು ಸಿಗತಾವ ಒಂದು ಮೊಳಕ್ಕ ನಾಕಾಣಿ ಎಂಟಾಣಿ ಇತ್ತು ಈಗ ನಾಕನೂರು ಆಗ್ಯಾದ ಕೊರೋನೋ ಸಮಯದ ಬಾಳ ಕಷ್ಟ ಪಟ್ಟಿವಿ ಕೌದಿಹೊಲದ ಮಕ್ಕಳ ಲಗ್ನ ಮಾಡೀನಿ ಗಂಡ ಕುಡುಕ ಆದರ ನಾ ಒಬ್ಬಾಕೆ  ದುಡದು ಅವನ ಸಾಕೀನಿ.
  ಹುಟ್ಟು ಸಾವಿಗೂ ಕೌದಿ ಬಳಸ್ತದ್ದಿರು, ಹೊಲಿಯಾಕ ಒಳ್ಳೆ ಮೂರ್ತ ಇಡುತ್ತಿದ್ದರು ಸುದಾ ಮೂರ್ತಿಯವರು ರಾಷ್ಡಪತಿಗಳಿಗೆ ಕೌದಿನಾ ಕಾಣಿಕೆ ಕೊಟ್ಟರು.ಕೌದಿ ಹೊಲಸಾದ್ರ ಹಳ್ಳದ ದಂಡಿಗೆ ಒಗಿಲಾಕ ಒಯ್ಯತಾರ. ತೊಟ್ಟಿಲ ಕೌದಿ ಅಂತ ಹೊಲಿತೀವಿ ಇದರ ಮ್ಯಾಲ ಮಗು ಮಲಗಿದರ ದಾರ ಮಗುವಿಗೆ ಚುಚ್ಚೋದಿಲ್ಲ ಕೌದಿ ಹೋಲಿಯಾಕ ಬರದ ಅರಿವಿ ಸಣ್ಣಗ ಕತ್ತರಿಸಿ ದಿಂಬು ಮಾಡ್ತೀವಿ. ’ಬಡವರ ಗಾದಿ ಕೌದಿ’ ದೊಡ್ಡ ದೊಡ್ಡ ಮಂದಿ ಹೊಲಿಯಾಕ ಬಟ್ಟಿ ಕೊಟ್ಟ ಮ್ಯಾಲ ನಾವು ಕೌದಿ ಹೊಲದು  ಅವರ ಮನಿಗೆ ಕೊಡಾಕ ಹೊದಾಗ ಕೌದಿ ಚಕ್ಕ್ ಮಾಡ್ತಾರ ಮತ್ತ ರೊಕ್ಕ ಕೊಡಾಕ ಚೌಕಾಸಿ ಮಾಡ್ತಾರ ,ಕೌದಿ ಹೊಲದು ನಾಕು ದುಡ್ಡು ಗಳಸಿ ಬೋರಮಳ ಸರ ಮಾಡ್ಸೀನಿ, ಮೇಲ್ಜಾತಿ ಮಂದಿ  ನಮ್ಮನ್ನ ಮನಿ ಒಳಾಕ ಬಿಟ್ಟಕೊಳ್ಳಲ್ಲ ಆದರೆ ನಾವು ಹೊಲದ ಕೌದಿ ಮನಿ ಒಳಾಗ ಹೊಕ್ಕಾವ ಆದರ ನಾವು ಹೋಗಾಂಗಿಲ್ಲ .ಇರಲಿ ಬಿಡು ನಮಗ ‘ಹುಬ್ಬಳ್ಳಿನಾ ಕೈಲಾಸ ಸಿದ್ದಾರೂಡರೇ ಪರಮೇಶ್ವರ’ ಶಿವರಾತ್ರಿ ದಿನಸಿದ್ಧರೂಡರ ಜಾತ್ರಿ. ಜಾತ್ರಿ ಮರದಿನ ಕೌದಿ ಉತ್ಸವ ಕೌದಿ ವೈರಾಗ್ಯ ಸಂಕೇತ ಬಡಿವಾರ ಬ್ಯಾಡ ಎನ್ನುವುದು ಸಿದ್ಧಾರೂಡರ ಅಭಿಪ್ರಾಯ ‘ಜಾತ್ರೆ ಶಾಶ್ವತ ಅಲ್ಲ ಕೌದಿ ಶಾಶ್ವತ’ ಅಂತಾರ ಸಿದ್ಧಾರೂಢರು.ಇಂಥಹ ಸಂಭಾಷಣೆಗಳಿಂದ ನಾಟಕ ಕಳೆಕಟ್ಟಿದೆ.
ನಾಟಕದ ತಂತ್ರ,
ಒಂದು ಲಲಿತ ಪ್ರಬಂದ ರೂಪದಲ್ಲಿ ಇದ್ದ ಕೌದಿ ಕಥೆಯನ್ನ ಗಣೇಶ್ ಅಮ್ಮಿನಗಡ ಅವರು ರಂಗ ರೂಪಕ್ಕೆ ತಂದು ಅದನ್ನು ಒಂದು ಪಾತ್ರದ ಮೂಲಕ ಹೇಳಿಸಿದ ಪರಿ ಶ್ಲಾಘನೀಯ ಒಂದು  ವಸ್ತುವನ್ನು ಕಥೆಯ ನಾಯಕನ್ನು ಮಾಡಬಹುದು ಎಂಬ  ಅವರ ವಿಭಿನ್ನ ಪರಿಕಲ್ಪನೆಯು ಅವರ ರಂಗ ಪಕ್ವತೆಗೆ ಸಾಕ್ಷಿ ಯಾಗಿದೆ  ಕೌದಿ ಒಂದು ಪಾತ್ರದೊಳಗೆ ಇಳಿದು ತನ್ನ ಅಂತರಂಗದ ತುಮುಲಗಳನ್ನು ತನ್ನ ಇತಿಹಾಸ ತನ್ನ ಜನಾಂಗ ಹೀಗೆ ನಾನಾ ಮುಖಗಳನ್ನು ಏಕ ಪಾತ್ರದ ಮೂಲಕ  ಕಥೆಯನ್ನು ನಿರೂಪಿಸಿದ ರೀತಿ ವಿಭಿನ್ನ ಹಾಗೂ ವಿಶಿಷ್ಟ..  ನಾಟಕದ ಓಘ ಬಳಸಿದ ಪರಿಕರ  ಭಾವಭಿನಯ ಎಲ್ಲವೂ ಪರಿಪೂರ್ಣ ಎನಿಸಿತು..ಏಕವ್ಯಕ್ತಿ ಯಾಗಿ ಇಡೀ ಕಥೆಯನ್ನು ವಿವಿಧ ಆಯಾಮಗಳಲ್ಲಿ ನಿರೂಪಿಸಿದ ಭಾಗ್ಯಶ್ರೀ ಪಾಳ ಅವರ ಅಭಿನಯದ ಶ್ರೀಮಂತಿಕೆಗೆ ಮೆಚ್ಚಿಗೆಯ ಚಪ್ಪಾಳೆ ಸಹಜವಾಗಿ ಸದ್ದು ಮಾಡಿದವು..ಭಾಷೆಯಲ್ಲಿ ಏರಿಳಿತಗಳಿದ್ದರೂ ಇನ್ನಷ್ಟು ಬೇಕೆನಿಸಿತು ಒಂದು ಗಂಟೆ ನಿರಂತರ ಮಾತಿನ ದಣಿವು ಇದಕ್ಕೆ ಕಾರಣವಿರಬಹುದು. ಬೆಳಕಿನ ವಿನ್ಯಾಸ ಇದಕ್ಕೆ ಅಷ್ಟೊಂದು ಸಾಥ್ ಕೊಡಲಿಲ್ಲ ನೋವಿನ ಕಥೆ ಹೇಳುವಾಗ  ಡಿಮ್ಮರ ಲೈಟ್ ಬಳಸಬೇಕಿತ್ತು ,ಸ್ಪಾಟ್ ಲೈಟ್ ಕೂರತೆ ಇತ್ತು..ಉಳಿದಂತೆ ರಂಗ ವಿನ್ಯಾಸ  ಸ್ಟೇಜ್ ಬಳಕೆ ಪ್ರಸಾದನ ಎಲ್ಲವೂ ಕಥೆಗೆ ಪೂರಕವಾಗಿತ್ತು..ಬೆಳಕಿನ ವಿನ್ಯಾಸ ಮಾಡಿದ ಪದ್ಮಾ ರಾಯಚೂರ್ ಇವರು ಅಭಿನಂದನಾರ್ಹರು.
ಕೌದಿಯ ಜೀವಾಳ ಸಂಗೀತದಲ್ಲಡಗಿತ್ತು..
ಒಂದು ಸಿನಿಮಾ ನಾಟಕ ಯಶಸ್ವಿಯಾಗುತ್ತದೆ ಅಂದರೆ ಅಲ್ಲಿ ಸಂಗೀತದ ಪಾತ್ರ ಬಹು ಮುಖ್ಯವಾಗಿರುತ್ತದೆ. ಕಥೆಯ ಸನ್ನಿವೇಶಕ್ಕೆ ಆವೇಶವನ್ನು ಪ್ರಸಂಗಕ್ಕೆ  ಪರಿಣಾಮವನ್ನು ತಂದು ಕೊಟ್ಟು ಪ್ರೇಕ್ಷಕನ ಮನಸ್ಸನ್ನು ಸೆಳೆಯುವ ರಸಭಾವವೇ ನಾಟಕದ ಹಿನ್ನಲೆ ಸಂಗೀತ.. ಇದು ಸನ್ನಿವೇಶಕ್ಕೆ ಪೂರಕವಾಗಿದ್ದರೆ ಪ್ರೇಕ್ಷಕ  ಮಹೋನ್ನತಿಯ ಮಟ್ಟಕ್ಕೆ ತಲುಪಿ.. ಮೈಮರೆತು ಕಥೆಯಲ್ಲಿ ತೇಲಿ ಮುಳುಗುತ್ತಾನೆ. ಇಂಥಹ ಶಕ್ತಿ ಹಿನ್ನಲೆ ಸಂಗೀತಕ್ಕಿದೆ.ಇದರ ಮಹತ್ವ ಅರಿತ ಕೌದಿ ನಾಟಕದ ನಿರ್ದೇಶಕ ಅದನ್ನು ಸಮರ್ಥವಾಗಿ ಈ ನಾಟಕದಲ್ಲಿ ಬಿಂಬಿಸಿದ್ದಾರೆ..ನಾಟಕದ ನಡು ನಡುವೆ ಬರುವ ಹಾಡುಗಳು ನಾಟಕದ ಪರಿಣಾಮವನ್ನು ಹೆಚ್ಚಿಸಿವೆ..ಈ ನಾಟಕದ ನಿರ್ಧೆಶಕರಾದ ಜಗದೀಶ್ ಜಾಣೆಯವರು ಅತ್ಯಂತ ಜಾಣ್ಮೆಯಿಂದ ಈ ಕಲಾಕೃತಿ ತಯಾರಿಸಿದ್ದಾರೆ. ಈ ನಾಟಕಕ್ಕೆ ದಾಕ್ಷಾಯಣಿ ಹುಡೇದ ಅವರ ಪದ್ಯಗಳನ್ನು ಹಾಗೂ ಶರೀಪರ ತತ್ವಪದಗಳನನ್ನು ಕಥಗೆ ಅನುಗುಣ ಬಳಸಿಕೊಂಡು ನಾಟಕದ ಮೆರಗನ್ನು ಹಾಗೂ ಪರಿಣಾಮವನ್ನು ಹೆಚ್ಚಿಸಿದ್ದಾರೆ
ಲೋಕದ ಕಾಳಜಿ ಮಾಡತನಂತಿ
ಯಾರ ಬ್ಯಾಡಂತರ ಮಾಡಪ್ಪ ಚಿಂತೆ
ನೀ ಮಾಡುವುದು ಗಡಿಗಿ ಸಂತಿ 
ಮೇಲ ಮಹಡಿ ಕಟ್ಟ ಬೇಕಂತಿ
ಆನೆ ಅಂಬಾರಿ ಏರ ಬೇಕಂತಿ
ಎಂಟು ಬಣ್ಣದ ಕೌದಿ ಮರಿತಿ ಈ ತರದ ಹಾಡುಗಳು ನೋಡುಗರ ಗಮನ ಸೆಳೆಯುತ್ತವೆ.

ಲೇಖಕರು ;-ಎ.ಎಂ.ಪಿ ವೀರೇಶಸ್ವಾಮಿ