ಇಂಡಿಯನ್ ನ್ಯಾಷನಲ್ ಆರ್ಮಿಗೆ ರಾಮ್‍ರಾವ್ ಅವರ ಕೊಡುಗೆ ಅಪಾರ: ವೆಂಕಟಪ್ಪ ನಾಗಪ್ಪಶೆಟ್ಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ. ಮಾ.26:- ಇಂಡಿಯನ್ ನ್ಯಾಷನಲ್ ಆರ್ಮಿಗೆ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಾಮ್‍ರಾವ್ ಅವರ ಕೊಡುಗೆ ಅಪಾರವಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ವಿ.ವೆಂಕಟಪ್ಪನಾಗಪ್ಪಶೆಟ್ಟಿ ತಿಳಿಸಿದರು.
ನಗರದ ಭಾರತ ಸೇವಾದಳದ ಕಚೇರಿಯಲ್ಲಿ ಐಎನ್‍ಎ ರಾಮ್‍ರಾವ್ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ನೇತಾಜಿಸುಭಾಷ್‍ಚಂದ್ರಬೋಸ್ ಅವರು ಕಟ್ಟಿದರು. ಅದಕ್ಕೆ ರಾಮ್‍ರಾವ್ ಅವರ ಕೊಡುಗೆ ಸಾಕಷ್ಟಿದೆ. ಅದಕ್ಕಾಗಿಯೇ ಅವರು ಐಎನ್‍ಎ ರಾಮ್‍ರಾವ್ ಎಂದೇ ಚಿರಪರಿಚಿತರಾದರು. ಇಂತಹ ಮಹನೀಯರ ಆದರ್ಶಗಳನ್ನು ಇಂದಿನ ಪೀಳಿಗೆಯ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಕೀರ್ತಿತರುವಂತಹ ಕೆಲವನ್ನು ಮಾಡಬೇಕು ಎಂದು ಕರೆ ನೀಡಿದರು.
ಸೇವೆಗಾಗಿ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ನಾ.ಸು.ಹರ್ಡಿಕರ್ ಅವರಿಂದ ಸ್ಥಾಪಿತವಾದಂತಹ ಭಾರತ ಸೇವಾದಳದ ಸಂಸ್ಥೆ ಉಳಿವಿಗೆ ಐಎನ್‍ಎ ರಾಮ್‍ರಾವ್ ಅವರೇ ಮೂಲ ಕಾರಣ ಎಂದರೆ ತಪ್ಪಾಗಲಾರದು. ರಾಮ್‍ರಾವ್ ಅವರು ವಿಧಿವಶರಾದ ಸಂದರ್ಭದಲ್ಲಿ ಅವರ ಚಿತಾಭಸ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕಳುಹಿಸಿಕೊಡಲಾಯಿತು. ಅವರ ಚಿತಾಭಸ್ಮವನ್ನು ಎಲ್ಲರೂ ಗೌರವ ಪೂರ್ವಕವಾಗಿ ನದಿಗಳಲ್ಲಿ ವಿಸರ್ಜಿಸುವಂತಹ ಸೂಚನೆ ಇತ್ತು. ಅದನ್ನು ನಮ್ಮ ಜಿಲ್ಲೆಯ ಎಲ್ಲ ಸಾರ್ವಜನಿಕರು ಗೌರವ ನೀಡುವ ಮೂಲಕ ಅವರ ಚಿತಾಭಸ್ಮವನ್ನು ಗೌರವ ಪೂರ್ವಕವಾಗಿ ನದಿಯಲ್ಲಿ ವಿಸರ್ಜಿಸಲಾಯಿತು. ಆ ಸಂದರ್ಭದಲ್ಲಿ ನಾನೂ ಕೂಡಾ ಸೇವಾದಳದಲ್ಲಿ ಸೇವೆ ಸಲ್ಲಿಸುತ್ತಿದ್ದೆ ಎಂದು ಸ್ಮರಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಸ್.ನಾಗರಾಜು ಮಾತನಾಡಿ, ರಾಮ್‍ರಾವ್ ಅವರಂತ ದೇಶಭಕ್ತರ ಜನ್ಮ ದಿನಚರಣೆ ನಡೆಸುತ್ತಿರುವುದು ನಿಜಕ್ಕೂ ಅವಿಸ್ಮರಣೀಯ. ಸೇವೆಗಾಗಿ ಬಾಳು ಎಂಬ ತತ್ವ ಅಳವಡಿಸಿಕೊಂಡಿದ್ದಾರೆ. ಮಕ್ಕಳಲ್ಲೂ ಇಂತಹ ಮನೋಭಾವನೆಯನ್ನು ಬೆಳೆಸುವಂತಾಗಬೇಕು ಎಂದರು.
ಕೋಶಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರು ಮಾತನಾಡಿ, ಭಾರತ ಸೇವಾದಳದ ಮೊದಲ ದಂಡನಾಯಕರಾದ ಐಎನ್‍ಎ ರಾಮ್‍ರಾವ್ ಅವರು ನಮ್ಮ ಜಿಲ್ಲೆಯವರು ಎಂಬುದು ನಮಗೆ ಹೆಮ್ಮೆಯ ಸಂಗತಿ. ರಾಮ್‍ರಾವ್ ಅವರು ತಮ್ಮ ಜೀವನವನ್ನೆ ಸೇವೆಗಾಗಿಯೇ ಮುಡುಪಾಗಿಟ್ಟಿದ್ದ ಮಹಾತ್ ಚೇತನ ಎಂದು ಬಣ್ಣಿಸಿದರು.
ಐಎನ್‍ಎ ರಾಮ್‍ರಾವ್ ಅವರು ನಮ್ಮ ಚಾಮರಾಜನಗರ ಜಿಲ್ಲೆಯವರಾಗಿರುವ ಕಾರಣ ಅವರ ಸೇವಾ ಮನೋಭಾವನೆಯನ್ನು ಗುರುತಿಸುವ ಮೂಲಕ ನಗರದ ಪ್ರಮುಖ ಸ್ಥಳದಲ್ಲಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಯಾವುದಾದರೂ ಒಂದು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿ.ಮಹದೇವಯ್ಯ, ತಾಲೂಕು ಸಮನ್ವಯ ಶಿಕ್ಷಣಾಧಿಕಾರಿ ರಾಜೇಂದ್ರ, ಜಿಲ್ಲಾ ಸಮಿತಿ ಸದಸ್ಯ ವೆಂಕಟೇಶ್ ನಾಯಕ್, ಚಾನಗರ ತಾಲೂಕು ಉಪಾಧ್ಯಕ್ಷÀ ಸಿ.ಮಲ್ಲಿಕಾರ್ಜುನ, ಜಿಲ್ಲಾ ಸಂಘಟಕ ಅರುಣ್ .ಈ, ಸಿಆರ್‍ಪಿ ಮಹೇಶ್ ಮತ್ತಿತರರಿದ್ದರು.