ವಿಜಯನಗರದಲ್ಲಿ ವಿಶಿಷ್ಟ ರೀತಿಯಲ್ಲಿ ಹೋಳಿ!
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಮಾ 25: ಬಣ್ಣದ ಹಬ್ಬ ಹೋಳಿಯನ್ನು ಹೊಸಪೇಟೆ ನಗರದ ಬಲ್ಡೋಟಾ ಪಾರ್ಕ್‌ನಲ್ಲಿ ಪತಂಜಲಿ ಪರಿವಾರ ಬಣ್ಣ ಬಣ್ಣದ ಹೂಗಳಿಂದ ಓಕುಳಿ ಆಡುವ ಮೂಲಕ ವಿಜಯನಗರದಲ್ವಿಲಿ ವಿಶಿಷ್ಠ ಆಚರಣೆಗೆ ಅಣಿಯಾಯಿತು.
ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಪ್ರಭಾರಿ ಭವರ್‌ಲಾಲ್‌ ಆರ್ಯ ಅವರ ಮಾರ್ಗದರ್ಶನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಪತಂಜಲಿ ಪರಿವಾರದ ಸಹಸ್ರಾರು ಮಂದಿ ಹೂವಿನ ಪಕಳೆಗಳನ್ನು  ಪರಸ್ಪರ ಎರಚಿ, ಹೋಳಿಯ  ಶುಭಾಶಯ ವಿನಿಮಯ ಮಾಡಿದರು. ಕೆಲವರು ನೈಸರ್ಗಿಕ ಬಣ್ಣವನ್ನು ಸಹ ಪರಸ್ಪರ ಹಚ್ಚಿ ಸಂಭ್ರಮಪಟ್ಟರು.
ರಾಸಾಯನಿಕ ಬಣ್ಣ ಬೇಡ: ‘ರಾಸಾಯನಿಕ ಬಣ್ಣ ಬಳಸುವುದರಿಂದ ಹಲವಾರು ಕಾಯಿಲೆಗಳು ಅದರಲ್ಲೂ ಮುಖ್ಯವಾಗಿ ಚರ್ಮಕ್ಕೆ ಅಪಾಯ ಇರುವುದು ಈಗಾಗಲೇ ಸಾಬೀತಾಗಿದೆ. ಅದರ ಬದಲು ಬಣ್ಣ ಬಣ್ಣದ ಹೂವಿನ ಪಕಳೆಗಳಿಂದಲೇ ಓಕುಳಿ ಆಡುವುದು ಸಾಧ್ಯವಿದೆ. ಇಲ್ಲಿ  ಅದನ್ನು ಮಾಡುವ ಮೂಲಕ ಹೊಸಪೇಟೆ ಇತರ ಕಡೆಗಳಿಗೂ ಮಾದರಿಯಾಗಿದೆ’ ಎಂದು ಭವರಲ್‌ಲಾಲ್‌ ಆರ್ಯ ಹೇಳಿದರು.
‘ಹೋಳಿ  ಎಂದರೆ ಎಲ್ಲರೂ ಜಾತಿ, ಮತ ಭೇದ ಮರೆತು ಆಚರಿಸುವ ಸಂಭ್ರಮ. ನಾವೆಲ್ಲರೂ ಒಂದೇ ಎಂಬ ಭಾವ ಈ ಹಬ್ಬದಲ್ಲಿ ಅಡಗಿದೆ. ನಮ್ಮ ಆಚರಣೆಗಳು ಪ್ರಕೃತಿಗೆ ಪೂರಕವಾಗಿದ್ದಾಗ ಪರಿಸರ ಶುದ್ಧವಾಗಿರುತ್ತದೆ, ನಮ್ಮ ಆರೋಗ್ಯವೂ ವೃದ್ಧಿಸುತ್ತದೆ’ ಎಂದು ಅವರು ತಿಳಿಸಿದರು.
‘ಹೊಸಪೇಟೆ ಯೋಗ ಸಾಧನೆಯಲ್ಲಿ ಇತರ  ಕಡೆಗಳಿಗೆ ಮಾದರಿ ಎಂಬುದನ್ನು ನಾನು ಹಲವು ಬಾರಿ  ಹೇಳಿದ್ದೇನೆ. ಇಲ್ಲಿ 28ಕ್ಕೂ ಅಧಿಕ  ಸ್ಥಳಗಳಲ್ಲಿ ಉಚಿತ ಯೋಗ ಶಿಬಿರ ನಡೆಯುತ್ತಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಯೋಗ ಶಿಬಿರ ಹೊಸ ಕ್ರಾಂತಿಯನ್ನೇ ಮಾಡಿಬಿಟ್ಟಿದೆ. ಅನಂತ ಜೋಷಿ ಅವರಂತಹ ಉತ್ಸಾಹಿಗಳ ಕಾರಣಕ್ಕೆ ಇದೆಲ್ಲ ಸಾಧ್ಯವಾಗುತ್ತಿದೆ. ಈ  ಪರಂಪರೆ ಇನ್ನಷ್ಟು ವಿಸ್ತರಿಸಬೇಕು ಎಂಬುದು ನಮ್ಮೆಲ್ಲರ ಆಶಯ’ ಎಂದು ಭವರ್‌ಲಾಲ್‌ ಆರ್ಯ ಹೇಳಿದರು.
ಬೆಳಿಗ್ಗೆ 5.15ರಿಂದ 6.45ರವವರೆಗೆ ನಿತ್ಯದಂತೆ ಯೋಗಾಭ್ಯಾಸ ನಡೆದ ಬಳಿಕ ಹೋಳಿ ಆಚರಣೆ ನಡೆಯಿತು. ಮೊದಲಿಗೆ ವಿವಿಧ ಯೋಗ ಶಿಬಿರಗಳ ಸಂಚಾಲಕರಿಗೆ ಹೂವಿನ ಹಾರ ಹಾಕಿ ಗೌರವಿಸಿದ ಭವರ್‌ಲಾಲ್‌ ಆರ್ಯ ಅವರು, ಬಳಿಕ ಜನರ ನಡುವೆಯೇ ತೆರಳಿ ಹೂಗಳನ್ನು ಎರಚಿ ಹೋಳಿ ಆಚರಣೆಗೆ ನಾಂದಿ ಹಾಡಿದರು.
ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಫ್‌.ಟಿ.ಹಳ್ಳಿಕೇರಿ, ಬಳ್ಳಾರಿ ಪ್ರಭಾರಿ ರಾಜೇಶ್ ಕಾರ್ವಾ, ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌  ಕುಮಾರ್,  ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಎಚ್‌.ಶ್ರೀನಿವಾಸ ರಾವ್, ಮಂಗಳಮ್ಮ, ಡಾ.ಮಲ್ಲಿಕಾರ್ಜುನ, ಶಿವಮೂರ್ತಿ, ಅಶೋಕ್ ಚಿತ್ರಗಾರ್‌, ಅನಂತ ಜೋಷಿ, ವಿವಿಧ ಯೋಗ ಕೇಂದ್ರಗಳ ಸಂಚಾಲಕರು ಇದ್ದರು.
ಸ್ವಾತಂತ್ರ್ಯ ಉದ್ಯಾನದಲ್ಲಿ:
ಸ್ವಾತಂತ್ರ್ಯ ಉದ್ಯಾನದಲ್ಲಿ ಸಹ ನಿತ್ಯದ ಯೋಗಾಭ್ಯಾಸದ ಬಳಿಕ ಸಂಭ್ರಮದಿಂದ ಹೋಳಿ ಅಚರಿಸಲಾಯಿತು. ಇಲ್ಲೂ ಸಹ ನೈಸರ್ಗಿಕ ಬಣ್ಣವನ್ನಷ್ಟೇ ಬಳಸಲಾಯಿತು. ಪರಸ್ಪರ ಬಣ್ಣ ಹಚ್ಚಿ, ಹಾಡುಗಳಿಗೆ ನೃತ್ಯ ಮಾಡಿದ ಯೋಗಪಟುಗಳು ಸಂಚಾಲಕ ಶ್ರೀರಾಮ ನೇತೃತ್ವದಲ್ಲಿ ಭ್ರಮಿಸಿದರು.