ದೇಶಪ್ರೇಮ ಪಕ್ಷದಿಂದ ರಾಜ್ಯದಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ: ಷಣ್ಮುಖಪ್ಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶ ಪ್ರೇಮ ಪಾರ್ಟಿಯಿಂದ  ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಜೊತೆಗೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿಯೊಬ್ಭರು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಷಣ್ಮುಖಪ್ಪ ಹೇಳಿದರು.
ನಗರದಲ್ಲಿ ನಿನ್ನೆ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2022 ಡಿಸೆಂಬರ್ ತಿಂಗಳಲ್ಲಿ ಚುನಾವಣಾ ಆಯೋಗ ದೇಶ ಪ್ರೇಮ ಪಾರ್ಟಿಗೆ ಮಾನ್ಯತೆ ನೀಡಿತು. ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದರಿಂದ ತರಾತುರಿಯಲ್ಲಿ ಬಳ್ಳಾರಿ ನಗರ, ಕಂಪ್ಲಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಸೇರಿ ಕೇವಲ ಮೂರು ಕ್ಷೇತ್ರಗಳಲ್ಲಷ್ಟೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತು. ಆದರೂ, ದೇಶದಲ್ಲಿ ಯಾವುದೇ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಮಾಡದ ಕೆಲಸವನ್ನು ದೇಶ ಪ್ರೇಮ ಪಾರ್ಟಿ ಮಾಡಿದೆ. ಕಂಪ್ಲಿ ಕ್ಷೇತ್ರದಿಂದ ಟಿ.ರಾಮಕ್ಕ ಎಂಬ ಮಂಗಳಮುಖಿಯೊಬ್ಬರನ್ನು ಕಣಕ್ಕಿಳಿಸಿ, ಗಮನ ಸೆಳೆಯಿತು. ಮಂಗಳಮುಖಿಯರನ್ನು ರಾಜಕೀಯವಾಗಿಯೂ ಮುನ್ನೆಲೆಗೆ ತರವು ನಿಟ್ಟಿನಲ್ಲಿ ನಮ್ಮ ಪಾರ್ಟಿಯಿಂದ ಆ ಕೆಲಸ ಮಾಡಲಾಯಿತು ಎಂದು ವಿವರಿಸಿದರು.
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ
ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಸಲಾಯಿತು ಎಂದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಇದೇ ವೇಳೆ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ಷಣ್ಮುಖ ಅವರು, ರೈತರಿಗ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಸಮರ್ಪಕ ಕುಡಿಯುವ ನೀರು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿತಲ್ಲಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮಂಗಳಮುಖಿ ಟಿ.ರಾಮಕ್ಕ ಸೇರಿ ಹಲವರು ಇದ್ದರು