ಬಿಸಿಲಿಗೆ ಜನ ಹೈರಾಣ
ಲಕ್ಷ್ಮೇಶ್ವರ,ಮಾ25: ಬೇಸಿಗೆಯ ಆರಂಭದಲ್ಲಿಯೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನತೆಯನ್ನು ಹೈರಾಣ ಆಗುವಂತೆ ಮಾಡಿದೆ.
ಮಾರ್ಚ್ ಕೊನೆಯ ವಾರದಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಜನತೆ ದಣಿವರಿಸಿಕೊಳ್ಳಲು ಕಲ್ಲಂಗಡಿ, ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳನ್ನು ಹೆಚ್ಚಾಗಿ ಬಳಸುತ್ತಿರುವುದು ಕಂಡುಬರುತ್ತಿದೆ.
ಮಾರುಕಟ್ಟೆಯಲ್ಲಿ ಎಳೆನೀರು ಹಾಗೂ ಕಲ್ಲಂಗಡಿಗೂ ಬೇಡಿಕೆ ಹೆಚ್ಚಾಗಿದೆ. ಪಟ್ಟಣದ ಪಂಪ ವೃತ್ತ, ಎಪಿಎಂಸಿ ಕ್ರಾಸ್, ಸವಣೂರ ರಸ್ತೆ, ಹೊಸ ಬಸ್‍ನಿಲ್ದಾಣ, ಶಿಗ್ಲಿ ಕ್ರಾಸ್ ಸೇರಿದಂತೆ ಹಲವು ಕಡೆ ಕಲ್ಲಂಗಡಿ, ಎಳೆನೀರು ಮಾರುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ.
ಮಾರ್ಚ್ ಕೊನೆಯಲ್ಲಿಯೇ ಬೇಸಿಗೆ ಹೆಚ್ಚಾಗಿದ್ದು, ಈ ಬಾರಿ ಸಕಾಲಕ್ಕೆ ಮಳೆ ಬಾರದಿದ್ದರೆ ಕಷ್ಟವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಕ್ರಿಯಿಸಿದರು.