ದಾವಲ ಮಲಿಕ್ ದರ್ಗಾ ಕಂಪೌಂಡ್ ವಾಲ್ ಉದ್ಘಾಟನೆ
ಬಸವಕಲ್ಯಾಣ:ಮಾ.25: ಯಾವುದೇ ಜಾತಿ, ಧರ್ಮ, ಮತ, ಪಂಥಗಳ ಭೇದ ಎಣಿಸದೆ ಸೂರ್ಯ ಚಂದ್ರರು ಸಮನಾದ ಬೆಳಕು ನೀಡುವರೋ, ಅದೇ ರೀತಿ ಪೂಜ್ಯ ಚನ್ನವೀರ ಶಿವಾಚಾರ್ಯರು ಸರ್ವರ ಕಲ್ಯಾಣಕ್ಕಾಗಿ ಸಮಭಾವದ ಆಶೀರ್ವಾದ ನೀಡುವಂತಹ ಅಪರೂಪದ ಸಂತರು ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹೀಮ್ ಖಾನ್ ನುಡಿದರು.
ತಾಲೂಕಿನ ಹಾರಕೂಡ ಗ್ರಾಮದಲ್ಲಿ ಹಾರಕೂಡ ಶ್ರೀಮಠದ ವತಿಯಿಂದ ನಿರ್ಮಿಸಲಾದ ಪೂಜ್ಯ ಹಜರತ ದಾವುಲ ಮಲಿಕ ಸಾಹೇಬರ ದರ್ಗಾದ ಸುತ್ತು ಗೋಡೆ (ಕಾಂಪೌಂಡ್ ವಾಲ್) ಉದ್ಘಾಟನಾ ಸಮಾರಂಭದಲ್ಲಿ ಆತಿಥ್ಯ ವಹಿಸಿ ಮಾತನಾಡಿದ ಸಚಿವರು, ಸರ್ವರ ಮಂಗಳ ಧಾಮದಂತಿರುವ ಹಾರಕೂಡ ಶ್ರೀಮಠದ ತತ್ವಾದರ್ಶಗಳು ಇಡೀ ದೇಶಕ್ಕೆ ಮಾದರಿ ಹಾಗೂ ಅನುಕರಣೀಯ.
ಎಲ್ಲಾ ಸೀಮೆಗಳನ್ನು ಮೀರಿದ ಭಾವೈಕ್ಯತೆಯ ಭಾವವೇ ಶ್ರೀ ಮಠದ ಜೀವಾಳವಾಗಿರುವುದನ್ನು ಕಂಡು ನನಗೆ ಎಲ್ಲಿಲ್ಲದ ಸಂತಸವಾಗಿದೆ. ರಾಮ ರಹೀಮರ ಐಕ್ಯತೆಯ ಅಪರಿಮಿತ ಶ್ರೇಷ್ಠ ವ್ಯಕ್ತಿತ್ವಧಾರಿಗಳಾದ ಚನ್ನವೀರ ಶಿವಾಚಾರ್ಯರು ಕನ್ನಡ ನಾಡಿನ, ಭರತ ಭೂಮಿಯ ದೊಡ್ಡ ಸಂಪತ್ತು ಎಂದು ಮನ ಬಿಚ್ಚಿ ನುಡಿದರು.
ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸಮಾರಂಭದ ಪಾವನ ಸನ್ನಿಧಾನವಹಿಸಿ ಶ್ರೀ ಮಠದ ವತಿಯಿಂದ ನಿರ್ಮಿಸಲಾದ ಕಂಪೌಂಡ್ ವಾಲ್ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಿದರು.
ಕಲಬುರಗಿ ಸಂಸದ ಡಾ. ಉಮೇಶ ಜಾಧವ, ಹಜರತ ದಾವುಲ ಮಲಿಕ್ ದರ್ಗಾದ ಮುಖ್ಯಸ್ಥ ಖಾಜಾಸಾಬ ಮುಲ್ಲಾ, ಬೀದರ ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ ಹಿರೇಮಠ, ಹಾರಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾವತಿ ಮೂಲಗೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ರಾಮಪ್ಪಾ ಗುದಗೆ, ಮುಖಂಡರಾದ ಅಬ್ದುಲ್ ಪಾಶಾ, ನಯಮುದ್ದೀನ್ ಪಟೇಲ್ ಭಾಗವಹಿಸಿದ್ದರು.
ವಿಠಲ ಹೂಗಾರ ಸ್ವಾಗತಿಸಿದರು.
ಚನ್ನಪ್ಪ ಹೊಳ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಖಾಸಿಂಸಾಬ್ ವಂದಿಸಿದರು.