ಗುಮ್ಮಟ ನಗರಿ ವಿಜಯಪುರದಲ್ಲಿ ಹೋಳಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ
ವಿಜಯಪುರ,ಮಾ.25:ಗುಮ್ಮಟನಗರಿ ವಿಜಯಪುರದಲ್ಲಿ ಸೋಮವಾರ ಹೋಳಿ ಹಬ್ಬದ ನಿಮಿತ್ತ ಬಣ್ಣದೋಕುಳಿ ಸಂಭ್ರಮ ಮುಗಿಲು ಮುಟ್ಟಿತ್ತು. ವಿಜಯಪುರಿಗರು ವಯಸ್ಸಿನ ಮಿತಿಯಿಲ್ಲದೆ ಬಣ್ಣದಲ್ಲಿಯೇ ಸ್ನಾನ ಮಾಡಿ ಕುಣಿದು ಕುಪ್ಪಳಿಸಿದರು.
ನಿನ್ನೆ ರಾತ್ರಿಯಷ್ಟೇ ಕಾಮದಹನ ಮಾಡಿದ ವಿಜಯಪುರಿಗರು ಸೋಮವಾರ 10 ಗಂಟೆಯಾಗುತ್ತಿದ್ದಂತೆಯೇ ಬಣ್ಣವಾಡಲು ಬೀದಿಗಿಳಿದರು. ತಮ್ಮ ಗೆಳೆಯರನ್ನು ಹುಡುಕಿಕೊಂಡು ಗಲ್ಲಿ ಗಲ್ಲಿಗಳಿಗೆ ತೆರಳಿ ಬಕೀಟ್ಗಟ್ಟಲೆ ಬಣ್ಣ ಸುರಿದು ತರೇಹವಾರಿ ಬಣ್ಣದಲ್ಲಿ ಮಿಂದೆದ್ದರು. ಬಣ್ಣದ ಉಸಾಬರಿ ಬೇಡವೆಂದು ಮನೆಯಲ್ಲಿ ಅವಿತುಕೊಂಡು ಕುಳಿತ ಸ್ನೇಹಿತರನ್ನು ಹುಡುಕಿಕೊಂಡು ಅಟ್ಟಾಡಿಸಿಕೊಂಡು ಬಣ್ಣ ಬಳೆದು ಕೇ ಕೇ ಹಾಕಿ ಕುಣಿದು ಕುಪ್ಪಳಿಸಿದರು. ಇಡೀ ದಿನ ಯುವಕರು ಹಲಗೆ ಬಾರಿಸುತ್ತ ತಂಡೋಪತಂಡವಾಗಿ ಸಂಚರಿಸಿ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಬೆಳ್ಳಂಬೆಳಗ್ಗೆ 6 ಗಂಟೆಯಾಗುತ್ತಿದ್ದಂತೆಯೇ ಚಿಣ್ಣರ ದಂಡು ದೊಡ್ಡವರಿಗಿಂತ ನಾವೂ ಬಣ್ಣ ಆಡುವುದರಲ್ಲಿ ಕಡಮೆ ಇಲ್ಲ ಎನ್ನುತ್ತ ಆಯಾ ಬಡಾವಣೆಗಳಲ್ಲಿ ತಮ್ಮ ಗೆಳೆಯರಿಗೆ ಬಣ್ಣದಲ್ಲಿ ಸ್ನಾನ ಮಾಡಿಸಿ ಖುಷಿ ಪಟ್ಟರು.
ಇಂದು ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪಾರಸ್ಥರು, ಅಂಗಡಿ ಕೆಲಸಗಾರರು ಬಣ್ಣವಾಡಿ ಸಂತೋಷದಿಂದ ಕುಣಿದಾಡಿದರು.