ರಾಜ್ಯದ 28 ಕ್ಷೇತ್ರಗಳು ಗೆಲ್ಲುವುದು ಶತಸಿದ್ಧ: ಆರ್ ಅಶೋಕ
ಬೀದರ್: ಮಾ.25:ರಾಜ್ಯದ 28 ಲೋಕಸಭೆ ಕ್ಷೇತ್ರಗಳು ಗೆಲ್ಲುವುದು ಶತಸಿದ್ಧ ಎಂದು ಕರ್ನಾಟಕ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಹೇಳಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಯತ್ರಿ ಧರ್ಮ ಪಾಲನೆಯಾಗಬೇಕಿದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಎರಡು ಪಕ್ಷಗಳ ಮುಖಂಡರ ಹಾಗೂ ಕಾರ್ಯಕರ್ತರ ಮೈತ್ರಿ ಧರ್ಮ ಪಾಲನೆಯಾಗಬೇಕಿದೆ. ಹಾಗಾಗಿ ರವಿವಾರ ಸಂಜೆ ಬೀದರ್ ಬಳಿಯ ರಿಟ್ರಿಟ್ ರೆಸಾರ್ಟ್‍ನಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಬೀದರ್ ಜಿಲ್ಲೆಯಲ್ಲಿ ಯಾರೋಬ್ಬ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಇಲ್ಲ. ಎಲ್ಲರು ಒಂದಾಗಿ ನರೇಂದ್ರ ಮೋದಿಜಿಯವರನ್ನು ಪ್ರಧಾನಿ ಮಾಡಬೇಕಿದೆ ಎಂದರು.
1957ರಲ್ಲಿ ದೇಶದಲ್ಲಿ ದೀಪದ ಚಿನ್ಹೆ ಇರುವ ಜನಸಂಘ ಬರೀ ನಾಲ್ಕು ಸೀಟುಗಳು ಗೆದ್ದಿತ್ತು. 2024ಕ್ಕೆ ದೇಶದಲ್ಲಿ 400 ಸೀಟುಗಳ ಗುರಿ ಬೆನ್ನತ್ತಿದ್ದೇವೆ. ನಮ್ಮ ಕಡೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕ್ಯಾಪ್ಟನ್ ಆಗಿ ಕಣದಲ್ಲಿದ್ದಾರೆ. ಚುನಾವಣೆ ಆಯೋಗ ಅಂಪಾಯರ್ ಕಾರ್ಯದಲ್ಲಿ ತೊಡಗಿದೆ. ಟಾಸ್ ಹಾಕಲು ರೆಡಿ ಇದೆ. ಆದರೆ ಎದುರಾಳಿ ಕಾಂಗ್ರೆಸ್‍ನಿಂದ ಟಾಸ್ ಸ್ವೀಕರಿಸಲು ಯಾರು ತಯ್ಯಾರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‍ನವರಿಗೆ ಅಭ್ಯರ್ಥಿಗಳು ಇಲ್ಲದ ಕಾರಣ ಮಂತ್ರಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳು, ಹೆಂಡತಿ, ಸಹೋದರ, ಅಳಿಯ ಹೀಗೆ ಮನೆಯಲ್ಲಿ ಕುಳಿತಿದ್ದವರನ್ನು ಬೀದಿಗೆ ತಂದು ಚುನಾವಣೆಯಲ್ಲಿ ನಿಲ್ಲಿಸುವ ಪರಿಸ್ಥಿತಿ ಕಾಂಗ್ರೆಸ್‍ನವರಿಗೆ ಬಂದಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಪರಿಸ್ಥಿತಿ ಬರುತ್ತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಮಳೆ ಜಾಸ್ತಿಯಾಗಿ ಜಲಾಶಯಗಳು ಭರ್ತಿಯಾಗಿ ಬಾಗೀನ ಅರ್ಪಿಸಿದ್ದೇವೆ. ಎನ್.ಡಿ.ಆರ್.ಎಫ್, ಎಸ್.ಟಿ.ಆರ್.ಎಫ್ನಿಂದ ಆಗಿನ ಸಂದರ್ಭದಲ್ಲಿ ನೆರೆಯಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಹಣ ಬಿಡುಗಡೆ ಮಾಡಿದ್ದೇವೆ. ರಾಜ್ಯದ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಂಗಳೂರಿನಲ್ಲಿ ಕೂಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಹಣವಿಲ್ಲದೇ ಗ್ಯಾರಂಟಿಗಳು ಸರಿಯಾಗಿ ಅನುಷ್ಟಾನವಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಬಿಟ್ಟರೆ ಇದೇ ಸಲ ಮೈನಸ್ ಬಜೆಟ್ ಮಂಡಿಸಿದ್ದಾರೆ. 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಒಂದೇ ಒಂದು ಹೊಸ ರಸ್ತೆ ನಿರ್ಮಾಣವಾಹಗಲಿ ಅಥವಾ ನಿರಾವರಿ ಯೋಜನೆಗಳು ಜಾರಿಗೆ ತರಲಿಲ್ಲ. ಹಿಂದೆ ಬೊಮ್ಮಾಯಿ ಸರ್ಕಾರ ಕೂಡಿಟ್ಟ 25 ಸಾವಿರ ಕೋಟಿ ಹಣದಿಂದ ಇಲ್ಲಿಯ ವರೆಗೆ ಅದನ್ನೆ ಖರ್ಚು ಮಾಡಿದ್ದಾರೆ. ಭ್ರಷ್ಟಾಚಾರವೇ ಕಾಂಗ್ರೆಸ್‍ನ ಪ್ರಮುಖ ಬಂಡವಾಳ. ಬೀದರ್, ಕಲಬುರಗಿ, ವಿಜಯಪುರ, ರಾಯಚುರು ಜಿಲ್ಲೆಗಳಿಂದ ಗುಳೆ ಹೋಗುವುದು ಪ್ರತಿ ವರ್ಷ ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಜನ ಗುಳೆ ಹೊರಟಿರುವುದು ಗಮನಿಸಿದರೆ ಇಂಥ ದರಿದ್ರ ಸರ್ಕಾರ ಜೀವನದಲ್ಲಿ ನೋಡಿಲ್ಲ ಎಂದರು.
ಬೀದರ್ ಲೋಕಸಭೆ ಅಭ್ಯರ್ಥಿಗಳು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ನಮ್ಮಲ್ಲಿ ಯಾವುದೇ ಮತಭೇದವಿಲ್ಲ. ಎಲ್ಲ ಶಾಸಕರೊಂದಿಗೆ ಮಾತನಾಡಿದ್ದೇನೆ. ವಿಶೇಷವಾಗಿ ಪ್ರಭು ಚವ್ಹಾಣ ಅವರ ಜೊತೆ ಸಹ ಮಾತನಾಡಿರುವೆ. ಮುಂಬೈಗೆ ಮಾತನಾಡಿದಲು ನೀವು ಬರಬೇಡಿ ನಾನೇ ಬರುವೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಪಕ್ಷ ಒಂದೆ, ತತ್ವ ಒಂದೆ, ಸಿದ್ದಾಂತ ಒಂದೆ ಹಾಗೇ ಗುರಿ ಮಾತ್ರ ನರೇಂದ್ರ ಮೋದಿಜಿಯವರನ್ನು ಮೂರನೇ ಬಾರಿಗೆ ಗೆಲ್ಲಿಸುವುದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಸ್ವರ ಖಂಡ್ರೆ ಅವರು ತಮ್ಮ ಮಗನಿಗೆ ಟಿಕೇಟ್ ಕೊಡಿಸಿ ಜಿಲ್ಲೆಯಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಸುಮಾರು 15 ಕೋಟಿ ವೆಚ್ಚದಲ್ಲಿ ಹತ್ತಾರು ಸಾವಿರ ಕಟೌಟ್‍ಗಳನ್ನು ಕ್ಷೇತ್ರದ್ದಾದ್ಯಂತ ಹಾಕಿಸಿದ್ದಾರೆ. ಅವರಿಗೆ ಹೇಳುವವರು , ಕೇಳುವವರು ಇಲ್ಲವೇ ಇಲ್ಲ ಎಂದ ಅವರು, ಈ ಬಾರಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ಭರವಸೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಹುಮನಾಬಾದ್ ಶಾಸಕ ಡಾ.ಸುದ್ದಲಿಂಗಪ್ಪ ಪಾಟೀಲ, ಚಿಂಚೋಳಿ ಶಾಸಕ ಅವಿನಾಶ ಜಾಧವ್, ಆಳಂದ ಮಾಜಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಮಾರುತಿರಾವ ಮುಳೆ, ಭಾಲ್ಕಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಲೋಕಸಭೆ ಕ್ಷೇತ್ರ ಉಸ್ತುವಾರಿ ಅಮರನಾಥ ಪಾಟೀಲ, ಪಕ್ಷದ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಸ್ವರಸಿಂಗ್ ಠಾಕೂರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪತ್ರಿಕಾ ಗೋಷ್ಟಿಯಲ್ಲಿದ್ದರು.