ಮಹಿಳೆಯರಿಗೆ ಕಾಯಕ ಯೋಗಿ ಪ್ರಶಸ್ತಿ ಪ್ರದಾನ
ಸಂಜೆವಾಣಿ ನ್ಯೂಸ್
ಮೈಸೂರು.ಮಾ.25:- ಕಾಯಕ ಫೌಂಡೇಷನ್ ವತಿಯಿಂದ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮೂವರು ಮಹಿಳಾ ಸಾಧಕರಿಗೆ ಕಾಯಕ ಯೋಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯದ ಅರವಳಿಕೆ ತಜ್ಞೆ ಡಾ.ದೇವಿಕಾ, ಚಿಗುರು ಆಶ್ರಮದ ಎಂ.ಎಸ್. ಸುಷಾ, ಸರಸ್ವತಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕಿ ಸರಸ್ವತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಅವರಿಗೆ ಕಾಯಕಯೋಗಿ ಪ್ರಶಸ್ತಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಪ್ರದಾನ ಮಾಡಲಾಯಿತು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳು ಹೆಣ್ಣು ಮಕ್ಕಳ ಕೇಂದ್ರಿತವಾಗಿವೆ. ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಯೋಜನೆಗಳನ್ನು ಸಮಾಜದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ. ಮಹಿಳೆಯರು ಹಕ್ಕಿಯಂತೆ ಹಾರಾಡುವುದನ್ನು ಪುರುಷ ಪ್ರಧಾನ ವ್ಯವಸ್ಥೆ ಸಹಿಸುತ್ತಿಲ್ಲ ಎಂದರು.
ತಮ ಮನೆಯ ಹೆಣ್ಣು ಮಕ್ಕಳಿಗೆ ಸರ್ಕಾರದ ಸವಲತ್ತು ದೊರೆಯುತ್ತಿದ್ದರೂ ಗಂಡಸ್ಸರು ವಿರೋಧಿಸುತ್ತಾರೆ. ಮನೆಯ ಯಾಜಮಾನನಿಗೆ ಮಾಸಿಕ 2 ಸಾವಿರ ರೂ. ಕೊಟ್ಟಿದ್ದರೆ ಬಹುಶಃ ಆ ಹಣ ಲಿಕ್ಕರ್ ಶಾಪ್‍ನಲ್ಲಿ ಖರ್ಚು ಮಾಡುತ್ತಿದ್ದರು ಎಂದು ತಿಳಿಸಿದರು.
ಯಾವತ್ತೂ ಹೆಣ್ಣು ಮಗಳೊಬ್ಬಳು ಒಬ್ಬಂಟಿಯಾಗಿ ಮಧ್ಯರಾತ್ರಿ ನಿರ್ಭಯವಾಗಿ ನಡೆದುಕೊಂಡು ಹೋದ ದಿನ ಮಹಿಳಾ ದಿನ ಆಚರಣೆಗೆ ಒಂದು ಅರ್ಥ ಬರುತ್ತದೆ. ಕಟ್ಟುಪಾಡುಗಳಿಂದ ಅವಳನ್ನು ಕಟ್ಟಿ ಹಾಕಿದರೆ ಆಚರಣೆಗಳಿಗೆ ಅರ್ಥವಿಲ್ಲ ಎಂದು ಹೇಳಿದರು.
ಹೆಣ್ಣು ಮಕ್ಕಳು ಯಾವುದೇ ಸಂದರ್ಭದಲ್ಲೂ ಕುಗ್ಗಬಾರದು. ಜೀವನದಲ್ಲಿ ಸೋತಾಗಲೂ ಧೈರ್ಯದಿಂದ ಮುನ್ನಡೆಯಬೇಕು. ಅವಕಾಶಗಳನ್ನು ಯಾರೂ ಸೃಷ್ಟಿಸಿ ಕೊಡುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ತಾವೇ ಸ್ವಯಂ ಪ್ರಯತ್ನ ಮಾಡಬೇಕು. ಯಾರ ಮೇಲೂ ಅವಲಂಬಿತರಾಗದೇ ಮುನ್ನಗ್ಗಬೇಕು ಎಂದು ನುಡಿದರು.
ಮನೆಯಿಂದಲೇ ಹೆಣ್ಣು-ಗಂಡು ತಾರತಮ್ಯ ನಿವಾರಣೆಯಾಗಬೇಕು. ಪೆÇೀಷಕರು ಗಂಡು ಮಕ್ಕಳಿಗೆ ಒಂದು ಹೆಣ್ಣು ಮಕ್ಕಳಿಗೆ ಮತ್ತೊಂದು ವಾತವರಣ ನಿರ್ಮಿಸಬಾರದು. 6 ಗಂಟೆಯ ನಂತರ ಹೆಣ್ಣು ಮಕ್ಕಳು ಯಾಕೇ ಮನೆಯಿಂದ ಹೊರಗೆ ಹೋಗುವಂತಿಲ್ಲ? ಪ್ರತಿ ಹೆಣ್ಣು ಮಗುವಿಗೂ ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿದರು.
ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಪುರುಷರ ನಡುವೆ ಹೋರಾಟ ಮಾಡುತ್ತಿದ್ದಾರೆ. ಇವತ್ತು ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಪುರುಷರಿಗಿಂತ ಕಡಿಮೆ ಇಲ್ಲದಂತೆ ಸಾಧಿಸಿದ್ದಾರೆ. ಕಾಯಕಯೋಗಿ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕಿ ಬಿ.ಕೆ. ಅರುಣಜ್ಯೋತಿ ಅವರ ಕಾರ್ಯ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಯಕ ಪತ್ರಿಕೆ ಸಂಪಾದಕಿ ಬಿ.ಕೆ. ಅರುಣಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮೀ ನಾಯಕ್ ಮಹಿಳಾ ಸಬಲೀಕರಣ ವಿಷಯ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಮಲ್ಲಿಕ್, ಹುಣಸೂರು ತಾಲೂಕು ಅಧ್ಯಕ್ಷ ಜಯರಾಮೇಗೌಡ, ಉಪ ಪ್ರಾಂಶುಪಾಲ ಮೋಕ್ಷಾಮಾಲಾ, ಕಾಯಕಯೋಗಿ ದಿನ ಪತ್ರಿಕೆ ಜಿಲ್ಲಾವರದಿಗಾರ ಅನಂತ್‍ಕುಮಾರ್ ಮುಂತಾದವರಿದ್ದರು.