ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನಲ್ಲಿ ಪೂರ್ವ ಸಿದ್ದತೆ
ವಿಜಯಪುರ.ಮಾ೨೫: ಮಾ.೨೫ ಸೋಮವಾರದಿಂದ ೧೦ ನೇ ತರಗತಿಯ ಮುಖ್ಯ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಾಲೂಕು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕಿನ ಪ್ರೌಢಶಾಲೆಗಳಲ್ಲಿ ಪೂರ್ವ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ.
ಸರ್ಕಾರಿ ಪ್ರೌಢ ಶಾಲೆ, ಸಮಾಜ ಕಲ್ಯಾಣ ಇಲಾಖೆ, ಅನುದಾನಿತ, ಅನುದಾನ ರಹಿತ ೭೦ ಶಾಲೆಗಳು ಸೇರಿದಂತೆ ೧೨ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೩೨೮೩ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ.
೧೨ ಮುಖ್ಯ ಅಧೀಕ್ಷಕರು, ೨ ಸಹಾಯಕ ಮುಖ್ಯ ಅಧೀಕ್ಷಕರು, ೧೨ ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್, ೧೨ ಸ್ತಾನಿಕ ಜಾಗೃತಿ ದಳ, ೮ ಮಾರ್ಗಾಧಿಕಾರಿಗಳು, ೧೬೨ ಕೊಠಡಿ ಮೇಲ್ವಿಚಾರಕರು, ೧೨ ಮೊಬೈಲ್ ಸ್ವಾಧೀನಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.
ಪರೀಕ್ಷೆ ಆರಂಭವಾದ ದಿನದಿಂದ ಮುಕ್ತಾಯದವರಿಗು ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿದಲ್ಲಿ ವಿದ್ಯಾರ್ಥಿಗಳ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದ ವರಿಗು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಪರೀಕ್ಷಾ ಕೇಂದ್ರದವರಿಗೆ ಮತ್ತು ವಾಸಸ್ಥಳಕ್ಕೆ ಮರಳಲು ಪ್ರವೇಶ ಪತ್ರದ ಆಧಾರದ ಮೇಲೆ ಉಚಿತ ಬಸ್ಸು ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಅವಕಾಶ ನೀಡಲಾಗಿದೆ.
ದೇವನಹಳ್ಳಿ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದ ೧೨ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಾದ ಕೊಠಡಿಗಳು, ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಯನ್ನು ಅಳವಡಿಸಿ ಕಾನೂನು ಪಾಲನೆಗಾಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಸ್ವಾದೀನಾಕಾರಿಗಳನ್ನು ನೇಮಿಸಿದ್ದು ಪರೀಕ್ಷಾ ಕೇಂದ್ರದಲ್ಲಿ ಭಾಗವಹಿಸುವ ಮತ್ತು ಆಗಮಿಸುವ ಯಾವುದೇ ಅಧಿಕಾರಿಯ ಮೊಬೈಲ್‌ನ್ನು ವಶಪಡಿಸಕೊಳ್ಳಲಾಗುತ್ತದೆ. ೨೦೨೩-೨೪ ಸಾಲಿನ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದಂತೆ ಪರೀಕ್ಷೆ ಬರೆಯಬೇಕು, ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆ ನಡೆಯುವ ದಿನದವರಿಗೂ ೯೧೬೪೫೪೬೨೯೨, ೭೮೫೯೨೦೬೩೪೬, ೮೯೭೦೪೦೬೪೫೫ ಪರೀಕ್ಷಾ ಕೇಂದ್ರದ ಕಛೇರಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ತಿಳಿಸಿದರು.