ಸುಮಲತಾ ಅಂಬರೀಶ್ ಪಕ್ಷೇತರವಾಗಿ ಸ್ಪರ್ಧೆ ಮಾಡೇ ಮಾಡುತ್ತಾರೆ
ಸಂಜೆವಾಣಿ ನ್ಯೂಸ್
ಮಂಡ್ಯ:ಮಾ.25:- ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಜೆಡಿಎಸ್-ಬಿಜೆಪಿ ನಡುವಿನ ಸೀಟು ಹಂಚಿಕೆಗೆ ಕೊನೆಗೂ ತೆರೆಬಿದ್ದಿದ್ದು, ದಳಪತಿಗಳಿಗೆ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಅಂತಿಮವಾಗಿದ್ದು, ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.
ಕೊನೆ ಕ್ಷಣದವರೆಗೂ ಮಂಡ್ಯ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ದೆಹಲಿ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳು ಕೈಗೂಡಲಿಲ್ಲ.
ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿದ್ದು, ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ಇಲ್ಲವೇ ಸಕ್ರಿಯ ರಾಜಕಾರಣದಿಂದ ದೂರ ಇರುತ್ತಾರೆಯೇ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಭೇಟಿಯಾಗಿ ಮಂಡ್ಯ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಆದರೆ ಈ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಕಾರಣ ಮಂಡ್ಯ ಕ್ಷೇತ್ರವು ದಳಪತಿಗಳ ಪಾಲಾಗಿದೆ.
ಪಕ್ಷೇತರವಾಗಿ ಸ್ಪರ್ಧಿಸಿ ಎಂದ ಆಪ್ತರು
ಈ ಮಧ್ಯೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್?ಗೆ ಟಿಕೆಟ್ ಸಿಗದ ಹಿನ್ನೆಲೆ ಅವರ ಆಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸದೆ ಆಪ್ತ ಹನಕೆರೆ ಶಶಿ ಮಾಧ್ಯಮದವರೊಂದಿಗೆ ಮಾತನಾಡಿ, ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಯಾಕೆ ಟಿಕೆಟ್ ಸಿಕ್ಕಿಲ್ಲವೋ ಗೊತ್ತಿಲ್ಲ. ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬೇಕು. ಈ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಸಭೆ ಮಾಡುತ್ತೇವೆ. ಅಲ್ಲಿಯೇ ಸುಮಲತಾ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ಮುಂದಿನ ರಾಜಕೀಯ ಜೀವನ ಮಂಡ್ಯದಲ್ಲಿ.ಹೀಗಾಗಿ ಮಂಡ್ಯದಿಂದ ಸ್ವರ್ಧೆ ಮಾಡಬೇಕು.ಅವರನ್ನೇ ನಂಬಿರುವ ಮತದಾರರ ನಿರ್ಧಾರ ತೆಗೆದುಕೊಳ್ಳಬೇಕು.ಅವರಿಗಾಗಿ ಅಲ್ಲದೆ ಇದ್ದರು ಮಂಡ್ಯದ ಜನರಿಗಾಗಿ ಸ್ವರ್ಧೆ ಮಾಡಬೇಕು ಎಂದಿದ್ದಾರೆ.
ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ. ಬಿಜೆಪಿ ನಾಯಕರಿಗೆ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆಸುವ ಆಸೆ ಇದ್ದು ಸುಮಲತಾ ಅವರ ಮೂಲಕ ಆ ಕಾರ್ಯ ಸಾಧಿಸುತ್ತಾರೆ ಅಂತ ಭಾವಿಸಲಾಗಿತ್ತು.ಅದರೆ ಬಿಜೆಪಿ ವರಿಷ್ಠರು ಸುಮಲತಾ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಯಾಕೆ ತೆಗೆದುಕೊಂಡರೋ ಅರ್ಥವಾಗುತ್ತಿಲ್ಲ ಎಂದು ಹನಕೆರೆ ಹೇಳಿದರು.
ಬಿಜೆಪಿ ಮತ್ತು ಸುಮಲತಾ ಪರವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ತೀವ್ರವಾಗಿ ನೊಂದುಕೊಂಡಿದ್ದಾರೆ, ಬಿಜೆಪಿ ವರಿಷ್ಠರ ನಿರ್ಧಾರ ಅವರಲ್ಲಿ ನೋವುಂಟು ಮಾಡಿದೆ.ಇದೇ ಹಿನ್ನೆಲೆಯಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರೆಲ್ಲ ಸುಮಲತಾ ಅವರನ್ನು ಆಗ್ರಹಿಸುತ್ತಿದ್ದೇವೆ.
ಗೆಲ್ಲುವ ಅತ್ಯುತ್ತಮ ಅವಕಾಶವಿರುವುದರಿಂದ ಅವರು ಸ್ಪರ್ಧಿಸಲೇಬೇಕು ಎಂದ ಅವರು ಸುಮಲತಾ ಮಾಡಿರುವ ಸಾಧನೆಗಳು ಒಂದೆರಡಲ್ಲ ಹಾಗಾಗಿ, ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೆಲ್ಲ ಸಭೆ ನಡೆಸಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಗ್ರಹಿಸುತ್ತೇವೆ ಎಂದರು.