ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಾ.ಸಿ.ಎನ್.ಮಂಜುನಾಥ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.25: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಹಾಗೂ ನಾಡಿನ ಪ್ರಖ್ಯಾತ ಹೃದ್ರೋಗ ತಜ್ಞ ಡಾಕ್ಟರ್ ಸಿ.ಎನ್ ಮಂಜುನಾಥ್ ಅವರು ಪತ್ನಿ ಶ್ರೀಮತಿ ಅನುಸೂಯ ಮಂಜುನಾಥ್ ಮತ್ತು ಕುಟುಂಬಸ್ಥರೊಡಗೂಡಿ ತಮ್ಮ ಮನೆ ದೇವರಾದ ತಾಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕತರಹಳ್ಳಿ ಗ್ರಾಮದ ಕೋಡಿಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಷ ಪೂಜೆ ಸಲ್ಲಿಕೆಯ ಅನಂತರ ಮಾತನಾಡಿದ ಡಾ. ಸಿ.ಎನ್.ಮಂಜುನಾಥ್ ಪ್ರತಿ ವರ್ಷ ಒಂದು ಅಥವಾ ಎರಡು ಸಲ ಇಲ್ಲಿಗೆ ಬಂದು ನಮ್ಮ ಕುಲ ದೇವತೆಯಾದ ಕೋಡಿಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ವರ್ಷವು ನಾವು ನಮ್ಮ ಕುಟುಂಬಸ್ಥರು, ಸಂಬಂಧಿಕರು, ನಮ್ಮ ಹಿತೈಷಿಗಳೊಂದಿಗೆ ಆಗಮಿಸಿ ಕುಲದೇವಿಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದ್ದೇವೆ. ದೇವರಲ್ಲಿ ನಂಬಿಕೆ ಇರಬೇಕು. ಇದರಿಂದ ನಮ್ಮ ಒಳ್ಳೆಯ ಕೆಲಸಗಳಿಗೆ ಪ್ರೇರಣೆಯಾಗುತ್ತದೆ. ನಾವು ಏನು ಕೆಲಸ ಮಾಡುತ್ತೇವೆ, ಯಾವ ರೀತಿ ಕೆಲಸ ಮಾಡುತ್ತೇವೆ. ಅದು ಒಳ್ಳೆಯದಾ? ಅಥವಾ ಕೆಟ್ಟದ್ದಾ? ಎನ್ನುವುದು ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಒಂದು ನಮ್ಮ ಅಂತರಾತ್ಮಕ್ಕೆ ಮತ್ತೊಂದು ಭಗವಂತನಿಗೆ. ನಾವು ಸದಾ ಸನ್ಮಾರ್ಗದಲ್ಲಿ ಸಾಗಬೇಕಾದರೆ ದೇವರಲ್ಲಿ ನಂಬಿಕೆಯಿರಬೇಕು. ರಾಜ್ಯದಲ್ಲಿಂದು ಮಳೆಯ ಅಭಾವವಿದೆ. ಕುಡಿಯುವ ನೀರಿಗೂ ಕೊರತೆಯಾಗಿದೆ. ನೀರಿನ ಅಭಾವದಿಂದ ರೈತಾಪಿ ವರ್ಗ ಸಂಕಷ್ಠಕ್ಕೆ ಸಿಲುಕಿದೆ. ಸಕಾಲಕ್ಕೆ ಮಳೆಯಾಗಿ ನೀರಿನ ಅಭಾವ ದೂರವಾಗಲಿ. ರೈತರ ಕೈಗೆ ಉತ್ತಮ ಫಸಲು ದೊರಕಿ ಅವರ ಬೆಳಗೆ ಒಳ್ಳೆಯ ಬೆಲೆ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು
ಈ ಸಂಧರ್ಭದಲ್ಲಿ ಡಾ. ಸಿ.ಎನ್.ಮಂಜುನಾಥ್ ಅವರ ಸಹೋದರ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ, ಶ್ರೀಮತಿ ಕುಸುಮಬಾಲಕೃಷ್ಣ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲಿಯ ನಿರ್ದೇಶಕರಾದ ಸಿ.ಎನ್.ಪುಟ್ಟಸ್ವಾಮಿ ಗೌಡ ಮತ್ತು ಶ್ರೀಮತಿ ಶುಭ ಪುಟ್ಟಸ್ವಾಮಿಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕ ಬಿ.ಎಸ್.ಮಂಜುನಾಥ್, ಆನೆಗೊಳ ಗ್ರಾಮಪಂಚಾಯಿತಿ ಉಪಾದ್ಯಕ್ಷರಾದ ನಂಜೇಶ್, ಮಾಜಿ ಉಪಾದ್ಯಕ್ಷರಾದ ಕಡಹೆಮ್ಮಿಗೆ ರಮೇಶ್, ಯೋಗೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಮಂಜೇಗೌಡ, ರಾಜು, ಮುಖಂಡರಾದ ಶಿಶುಪಾಲ, ಚಿಕ್ಕತರಹಳ್ಳಿ ರಾಮಕೃಷೇಗೌಡ ಬೋಳಮಾರನಹಳ್ಳಿ ಪುಟ್ಟಸ್ವಾಮಿಗೌಡ, ಕಾಯಿ ರಾಮಣ್ಣ, ರಂಗಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಧು, ಚಿಕ್ಕತರಹಳ್ಳಿ ಮಂಜು, ಸೇರಿದಂತೆ ಆನೆಗೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರುಗಳು ಸಾರ್ವಜನಿಕರು ಉಪಸ್ಥಿತರಿದ್ದರು.