ಜೆಡಿಎಸ್‍ನಲ್ಲೇ ಉಳಿದು ಮುಂದಿನ ರಾಜಕೀಯ ಭವಿಷ್ಯಕ್ಕೆ ನಿರ್ಧಾರ
ಸಂಜೆವಾಣಿ ವಾರ್ತೆ
ಮಂಡ್ಯ:ಮಾ.25:- ನಿತ್ಯ ಸಚಿವ ಕೆ.ವಿ. ಶಂಕರಗೌಡ ಅವರ ಮೊಮ್ಮಗ ಹಾಗೂ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಜೆಡಿಎಸ್‍ನಲ್ಲೇ ಉಳಿದು ಮುಂದಿನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.
ಶನಿವಾರ ನಗರದ ಕಲ್ಲಹಳ್ಳಿಯ ವಿ.ವಿ.ನಗರದಲ್ಲಿರುವ ಹೊಂಬಾಳೆ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಬೆಂಬಲಿಗರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಆರೇಳು ತಿಂಗಳುಗಳಿಂದ ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೆ. ಈ ಸಮಯದಲ್ಲಿ ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಹಲವಾರು ಮಂದಿ ಕೇಳುತ್ತಲೇ ಇದ್ದರು. ನಾನು ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ ಎಂದು ಹೇಳಿದರು.
ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿದ್ದರು.ಜೆಡಿಎಸ್ ಮಾಜಿ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ ಎಲ್ಲರೂ ನನ್ನೊಂದಿಗೆ ಮಾತನಾಡಿ ಬೇರೆ ನಿರ್ಧಾರ ಮಾಡದಂತೆ ಸಲಹೆ ನೀಡಿದ್ದರು. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೂರವಾಣಿ ಮುಖಾಂತರ ನನ್ನನ್ನು ಎರಡು ಬಾರಿ ಸಂಪರ್ಕಿಸಿ ಬೆಂಗಳೂರಿಗೆ ಬರುವಂತೆ ತಿಳಿಸಿದ್ದರು. ಅಂದಿನ ಪರಿಸ್ಥಿತಿಯಲ್ಲಿ ನಿಮ್ಮನ್ನು ಕೇಳದೆ ಹೋಗಲೇಬೇಕಾದ ಪರಿಸ್ಥಿತಿ ಇತ್ತು ಹೋಗಿ ಭೇಟಿ ಮಾಡಿದೆ.ಆ ಸಮಯದಲ್ಲಿ ಕುಮಾರಸ್ವಾಮಿ ಅವರು ನನ್ನ ಜೊತೆಯಲ್ಲೇ ಇರುವಂತೆ ತಿಳಿಸಿದಾಗ, ನಾನು ನನ್ನ ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿ ಬಂದಿದ್ದೇನೆ ಎಂದರು.
ನಾನು ಪಕ್ಷದಲ್ಲಿರುವುದಕ್ಕೆ ವರಿಷ್ಠರ ಬಳಿ ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ.ಈಗ ನಾನು ಯಾವುದನ್ನೂ ಕೇಳಿಯೂ ಇಲ್ಲ,ಸದ್ಯಕ್ಕೆ ಯಾವುದನ್ನೂ ಕೇಳೋದೂ ಇಲ್ಲ. ನಾನು ಎಲ್ಲಿಗೇ ಹೋದರೂ ಲಾಸ್ಟ್ ಬೆಂಚ್ ಅನ್ನೋದು ನನಗೆ ಗೊತ್ತಿದೆ. ಕೆಲವರು ಜಿಪಂ ಸದಸ್ಯನನ್ನಾಗಿ ಮಾಡಿ ಅಧ್ಯಕ್ಷನನ್ನಾಗಿ ಮಾಡ್ತಾರೆ ಅಂತಾರೆ. ನಾನು ಜಿಪಂ ಸದಸ್ಯನಾಗಿದ್ದಾಗಲೇ ಏನೂ ಆಗಲಿಲ್ಲ. ಹಾಗಾಗಿ ಇಲ್ಲದಿರುವ ಆಸೆಗಳನ್ನೆಲ್ಲಾ ಇಟ್ಟುಕೊಳ್ಳುವುದಿಲ್ಲ. ನಾನು ಯಾವುದೇ ಬೇಡಿಕೆಯನ್ನೂ ಇಟ್ಟಿಲ್ಲ, ಆ ವಿಚಾರ ಪ್ರಸ್ತಾಪವೂ ಆಗಿಲ್ಲ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏನೋ ವ್ಯತ್ಯಾಸಗಳಾಗಿ ನಾನು ಅಭ್ಯರ್ಥಿಯಾಗಿ ಸ್ಪ„ಸುವ ಸನ್ನಿವೇಶ ಸೃಷ್ಟಿಯಾಯಿತು. ಅಂದು ಎಲ್ಲರೂ ನನ್ನೊಂದಿಗೆ ಬೆಂಬಲವಾಗಿ ನಿಂತು ಶಕ್ತಿ ತುಂಬಿದ್ದೀರಿ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಅದರಿಂದಲೇ 15 ಸಾವಿರಕ್ಕೂ ಹೆಚ್ಚು ಮತಗಳು ನನಗೆ ಬರಲು ಕಾರಣವಾಯಿತು. ಕೆಲವರು ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಅದರ ಬಗ್ಗೆಯೂ ನನಗೆ ಯಾವುದೇ ಬೇಸರವಿಲ್ಲ. ನನ್ನ ಜೊತೆ ನೀವೆಲ್ಲರೂ ಇದ್ದೀರಿ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದೀರಿ. ನಿಮಗೆ ನಾನೆಂದಿಗೂ ಮೋಸ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಕೋಪ ಎನ್ನುವುದು ನನ್ನ ದೌರ್ಬಲ್ಯವಾಗಿತ್ತು. ಈಗ ಅದೂ ಕೂಡ ಶೇ.90ರಷ್ಟು ಕಡಿಮೆ ಮಾಡಿಕೊಂಡಿದ್ದೇನೆ. ಅದು ನನ್ನ ತಾತ ಕೆ.ವಿ.ಶಂಕರಗೌಡರಿಂದ ಬಂದಿರುವ ಬಳುವಳಿ. ಇನ್ನೂ ಕೋಪ ಕಡಿಮೆ ಮಾಡಿಕೊಳ್ಳ
ಬೇಕೆಂದರೆ ಅದನ್ನೂ ಮಾಡಿಕೊಳ್ಳುವುದಕ್ಕೆ ಸಿದ್ಧನಿದ್ದೇನೆ. ಜೆಡಿಎಸ್‍ನಲ್ಲಿ ಉಳಿಯುವ ಬಗ್ಗೆ ಬಹುತೇಕರು ಅನಿಸಿಕೆ,ಆಶಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಸೆಗೆ ವಿರುದ್ಧವಾಗಿ ನಾನು ಎಂದಿಗೂ ನಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.
ಒಮ್ಮೆ ನನ್ನ ನಿರ್ಧಾರದಿಂದ ಯಾರಿಗಾದರೂ ಬೇಸರವಾಗಿದ್ದರೆ ನನ್ನನ್ನು ಕ್ಷಮಿಸಿ. ಬೈಯ್ಯುವುದಾದರೆ ನನ್ನನ್ನೇ ಬೈಯ್ಯಿರಿ. ನಾನು ಯಾರ ಒತ್ತಡಕ್ಕೆ ಒಳಗಾಗಿಯೂ ಈ ನಿರ್ಧಾರ ಮಾಡಿಲ್ಲ. ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಿ ವಾಪಸ್ ಬರಲಿ. ನನ್ನ ಮೇಲೆ ವಿಶ್ವಾಸವಿಟ್ಟು ಕರೆ ಮಾಡಿ ಆಹ್ವಾನ ನೀಡಿದ ಕಾಂಗ್ರೆಸ್ ನಾಯಕರು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಅಭಿಮಾನಿಗಳು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಸಮಯದಲ್ಲೂ ಎಲ್ಲರೂ ಕೆ.ಎಸ್.ವಿಜಯ್ ಆನಂದ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅವರ ಜೊತೆ ಇರುವುದಕ್ಕೆ ಸಿದ್ಧರಿರುವುದಾಗಿ ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಜಿ.ತಿಮ್ಮೇಗೌಡ ಮಾತನಾಡಿ ಕೆ.ವಿ. ಶಂಕರಗೌಡರ ತ್ಯಾಗ, ಪರಿಶ್ರಮ ನೆನೆಯುವ ಕೆಲಸವಾಗಬೇಕಿದೆ. ವಿಜಯ್ ಆನಂದ್ ಜನರ ಮಧ್ಯೆ ಇರುವ ಯುವ ನಾಯಕನಾಗಿ ಬೆಳೆಯಲು ನಮ್ಮೆಲ್ಲರ ಸಹಕಾರವಿರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನೊಡನೆ ಮಾತನಾಡಿದ್ದಾರೆ. ಕೆಲವು ನಾಯಕರಿಂದ ಈ ಹಿಂದಿನ ಚುನಾವಣೆಯಲ್ಲಿ ಅನ್ಯಾಯವಾಗಿದೆ. ಜೆಡಿಎಸ್ ಪಕ್ಷ ನಿಮ್ಮಂತಹ ಕಾರ್ಯಕರ್ತರಿಂದ ಬೆಳೆದಿರುವ ಪಕ್ಷ. ನೀವೇ ಇಲ್ಲದಿದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದಾರೆ. ಅವರ ಮನವಿಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದರು.
ಮಂಡ್ಯ ನಗರದಲ್ಲಿ ಸುಲಭವಾಗಿ ಜನರ ಕೈಗೆ ಸಿಗುವ ನಾಯಕರಾಗಿರುವ ವಿಜಯ್ ಆನಂದ ಅವರು, ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಕಾರ್ಯದಲ್ಲಿ ನಿರತರಾಗಬೇಕು. ಆ ಮೂಲಕ ಕೆ.ವಿ.ಶಂಕರಗೌಡರ ಮನೆಗೆ ಬೆಳಕಾಗಬೇಕು ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲ ಪೆÇ್ರ. ಎಚ್.ಎಸ್.ನರಸಿಂಹಮೂರ್ತಿ ಮಾತನಾಡಿ, ಕೆವಿಎಸ್ ಕುಟುಂಬದ ಕುಡಿ ರಾಜಕಾರಣದಲ್ಲಿ ಬೆಳೆಯಬೇಕು. ಅದಕ್ಕೆ ನಾವೆಲ್ಲರೂ ಪೆÇ್ರೀತ್ಸಾಹ ನೀಡಬೇಕು. ಎಲ್ಲರ ಅಪೇಕ್ಷೆಯಂತೆ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಮರ್ಥರನ್ನು ಬೆಂಬಲಿಸುವ ಪಕ್ಷಕ್ಕೆ ವಿಜಯ್ ಆನಂದ್ ಮರಳಲಿ. ಎಚ್.ಡಿ. ಕುಮಾರಸ್ವಾಮಿ ಅವರು ಆರೋಗ್ಯವಾಗಿ ಮರಳಿದ ನಂತರ ಪಕ್ಷ ಸೇರ್ಪಡೆಯಾಗಿ ಕೆ.ವಿ. ಶಂಕರಗೌಡರ ದಾರಿಯಲ್ಲಿ ಸಾಗಲಿ ಎಂದು ಹಾರೈಸಿದರು.
ಈ ನಡುವೆ ಅಭಿಮಾನಿಯೋರ್ವ ವಿಜಯ್ ಆನಂದ್ ಕೆ.ವಿ.ಶಂಕರಗೌಡ ಕುಡಿ ಬೆಳೆಯಲು ಅನುವಾಗುವಂತೆ ಸಾಮಸಾರಿಕ ಜೀವನಕ್ಕೆ ಕಾಲಿಡಿ ಎಂಬ ಸಲಹೆಯನ್ನೂ ತುಂಬಿದ ಸಭೆಯಲ್ಲಿ ನೀಡಿ ಎಲ್ಲರ ಗಮನ ಸೆಳೆದರು.ಜಯಶೀಲಮ್ಮ ಮಾತನಾಡಿ, ವಿಧಾನಸಭೆ ಸೋಲಿನ ನಂತರ ನಾಯಕರಿಲ್ಲದೆ ಅನಾಥರಾಗಿದ್ದೇವೆ. ಮಾಜಿ ಶಾಸಕ ಎಂ.ಶ್ರೀನಿವಾಸ್ ನಮ್ಮನ್ನು ಕಡೆಗಣಿಸಿದ್ದಾರೆ. ಇಂದು ದೇಶ ಉಳಿಯುವ ನಾಯಕತ್ವಕ್ಕೆ ನಾವೆಲ್ಲ ಬೆಂಬಲಿಸಬೇಕು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯಾಗಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ಪೂರ್ಣಚಂದ್ರ, ಯತೀಶ್ ಬಾಬು,ಪುಟ್ಟಸ್ವಾಮಿ,ಉಮೇಶ್, ವೆಂಕಟೇಶ್,ಮಾಜಿ ಸದಸ್ಯೆ ಗೀತಾ ಜಯಕುಮಾರ್,ಪುಟ್ಟಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.