ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಮರುಳಸಿದ್ದ ಸ್ವಾಮೀಜಿ
ಅಥಣಿ :ಮಾ.25: ಜಾತಿ ಮತ ಪಂಥ ಎನ್ನದೆ ಮಾನವ ಕುಲಕ್ಕೆ ಒಳಿತನ್ನು ಬಯಸಿದ ಜಗದ್ಗುರು ರೇಣುಕಾಚಾರ್ಯರು ಭಾವೈಕ್ಯತೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಬದುಕನ್ನು ಅವರು ಬೋಧಿಸಿದ್ದಾರೆ. ಅವರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ತಾಲೂಕಾ ಆಡಳಿತ ಅಥಣಿ ಮತ್ತು ತಾಲೂಕಾ ಜಂಗಮ ಅಭಿವೃದ್ದಿ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರಿದ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ತತ್ವ ಸಂದೇಶವನ್ನು ನೀಡುವದರ ಮೂಲಕ ಜಾತಿ ರಹಿತ ಭಾವೈಕತೆಯ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಜಂಗಮ ಸಮಾಜದ ಮಹಿಳಾ ಘಟಕ ಅಧ್ಯಕ್ಷೆ ಮೀನಾಕ್ಷಿ ತೆಲಸಂಗ ಮಾತನಾಡಿ ಜಗದ್ಗುರು ರೇಣುಕಾಚಾರ್ಯರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಾಗಿದೆ. ಮಾನವ ಜನಾಂಗ ಒಂದೇ ಪುರುಷ ಹಾಗೂ ಮಹಿಳೆ ಸರಿ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ ಮಾತನಾಡಿ ಮನುಕುಲಕ್ಕೆ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಅನನ್ಯವಾಗಿದೆ ನಾವು ಸಮಾನತೆ ಹಾಗೂ ಜಾತಿ ರಹಿತ ಸಮಾಜ ಕಟ್ಟಬೇಕಾದರೆ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದು ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಒಳವಡಿಸಿಕೊಂಡಾಗ ಮಾತ್ರ ಸಾಧ್ಯ. ರೇಣುಕಾಚಾರ್ಯರ ಜಯಂತಿಯನ್ನು ಕೇವಲ ಜಂಗಮರಷ್ಟೇ ಸೇರಿ ಆಚರಣೆ ಮಾಡುವುದಲ್ಲ. ಸಮಸ್ತ ವೀರಶೈವ ಲಿಂಗಾಯತ ಸಮಾಜದವರೆಲ್ಲ ಕೂಡಿ ಆಚರಣೆ ಮಾಡಬೇಕು ಎಂದು ಕರೆ ನೀಡಿದರು.
ವೇದಮೂರ್ತಿ ಕಾಡಯ್ಯಾ ಹಿರೇಮಠ ಮತ್ತು ಸಂಗಮೇಶ ಕಲ್ಮಠ ಅವರು ರೇಣುಕಾಚಾರ್ಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಂಗಮ ಸಮಾಜದ ಅಧ್ಯಕ್ಷ ಈರಣ್ಣಾ ಜಗದಾಳಮಠ ವಹಿಸಿದ್ದರು.
ಜಂಗಮ ಸಮಾಜದ ಪರವಾಗಿ ಗ್ರೇಡ್ 2 ತಹಶೀಲ್ದಾರ ಬಿ.ವಾಯ್. ಹೋಸಕೇರಿ ಅವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಗ್ರೇಡ 2 ತಹಶೀಲ್ದಾರ ಬಿ ವಾಯ್ ಹೊಸಕೇರಿ, ಕಂದಾಯ ನೀರಿಕ್ಷಕ ಎಸ್.ಬಿ.ಮೆಣಸಂಗಿ ರಾಜು ತುಬಚಿ ಸಮಾಜದ ಮುಖಂಡರಾದ ಅಶೋಕ ಅಳ್ಳಿಮಟ್ಟಿ. ಶಿವು ತೆಲಸಂಗ. ಜಗದೀಶ ಹಿರೇಮಠ. ಅಶೋಕ ಅವಟಿಮಠ. ಸಂಜಯ ತೆಲಸಂಗ. ಶಿವು ಅಳ್ಳಿಮಟ್ಟಿ. ಸೋಮು ಅಂಬಲಿಮಠ. ರಾಜು ಮಠಪತಿ. ಐ.ಜಿ. ಜಗದಾಳಮಠ. ಶರಣಯ್ಯಾ ವಸ್ತ್ರದ. ಎಸ್.ಜೆ.ಹಿರೇಮಠ. ಶಿವಮೂರ್ತಯ್ಯ. ಮಹಿಳಾ ಘಟಕದ ಮೀನಾಕ್ಷಿ ತೆಲಸಂಗ. ಚಂದಾ ಹಿರೇಮಠ. ಗಂಗಾ ಅಳ್ಳಿಮಟ್ಟಿ ಮುಂತಾದವರು ಉಪಸ್ಥಿತರಿದ್ದರು.
ವಿಜಯ ಹಿರೇಮಠ ಸ್ವಾಗತಿಸಿದರು.ಶರಣಯ್ಯಾ ವಸ್ತ್ರದ ನಿರೂಪಿಸಿದರು. ಸಂಗಮೇಶ ಕಲ್ಮಠ ವಂದಿಸಿದರು.