ಕೂಡ್ಲಿಗಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.24 :- ಬಳ್ಳಾರಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೂಡ್ಲಿಗಿ 96- ವಿಧಾನಸಭಾ ಕ್ಷೇತ್ರದ 250ಮತಗಟ್ಟೆಗಳು ಸೇರಿದಂತೆ ಜಿಲ್ಲಾ ಗಡಿಭಾಗದ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಅನುಸರಿಸುವ ಮೂಲಕ  ನಾಲ್ಕು ಚೆಕ್ ಪೋಸ್ಟ್ ತೆರೆಯಲಾಗಿದ್ದು ಮತದಾರರನ್ನು ಆಮಿಷವೊಡ್ಡುವ ಯಾವುದೇ ಹಣ, ಪಕ್ಷದ ಪಾಂಪ್ಲೆಟ್ಸ್, ಸೀರೆ ಸೇರಿದಂತೆ ಯಾವುದೇ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡದಂತೆ ಪ್ರತಿಯೊಂದು ವಾಹನಗಳ ತಪಾಸಣೆ ಮಾಡುವ ಮೂಲಕ ಅಲ್ಲಿನ ಅಧಿಕಾರಿಗಳು ಕಣ್ಗವಲಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೆ ಚುನಾವಣೆಗೆ ಸಂಬಂದಿಸಿದ ನೇಮಕಗೊಂಡ ಅಧಿಕಾರಿ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ   ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಚುನಾವಣಾ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಬಳ್ಳಾರಿ ಲೋಕಸಭಾ ಚುನಾವಣೆಯ  ಕೂಡ್ಲಿಗಿ 96ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ ಹೆಚ್ ಎನ್ ರಘು ತಿಳಿಸಿದ್ದಾರೆ.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಕರೆದ ಪತ್ರಕರ್ತರ ಸಭೆಯಲ್ಲಿ ಮಾತನಾಡುತ್ತ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ನಿಮಿತ್ತವಾಗಿ 250ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಹಿಂದೆ 245ಮತಗಟ್ಟೆಗಳಿದ್ದು ಈ ಬಾರಿ  ನೂತನವಾಗಿ ಮಾಡ್ಲಾಕನಹಳ್ಳಿ ಗೊಲ್ಲರಹಟ್ಟಿ, ನುಂಕನಹಳ್ಳಿ, ಮಡಕಲಕಟ್ಟೆ, ನಾಗೇನಹಳ್ಳಿ ಹಾಗೂ ಬೆಳ್ಳಿಕಟ್ಟೆ ಗೊಲ್ಲರಹಟ್ಟಿ ಸೇರಿ 5ಮತಗಟ್ಟೆಗಳು ಹೆಚ್ಚು ಮಾಡಿ ಮತದಾರರಿಗೆ ಅನುಕೂಲ ಮಾಡಲಾಗಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ ಪುರುಷರು -105036, ಮಹಿಳೆಯರು -102586 ಹಾಗೂ ಇತರೆ 11 ತೃತೀಯ ಲಿಂಗಿಗಳು ಸೇರಿ ಒಟ್ಟು 207633 ಮತದಾರರಿದ್ದಾರೆ.ಮತಗಟ್ಟೆ ಸಂಖ್ಯೆ 99- ಅರ್ಜುನಚಿನ್ನೇನಹಳ್ಳಿಯಲ್ಲಿ 1467 ಮತದಾರರನ್ನು ಹೊಂದಿದ್ದು ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿರುವ ಮತಗಟ್ಟೆಯಾದರೆ, ಮತಗಟ್ಟೆ ಸಂಖ್ಯೆ 200ತಿಪ್ಪೇಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ 219ಮತದಾರರಿದ್ದು ಅತೀ ಕಡಿಮೆ ಮತದಾರರಿರುವ ಮತಗಟ್ಟೆಯಾಗಿದೆ.
ಮತಗಟ್ಟೆ ಸ್ಥಳಾಂತರ : ಪಟ್ಟಣದ 36ಹಾಗೂ 37ಸಂಖ್ಯೆಯ ಮತಗಟ್ಟೆಗಳು ಈ ಹಿಂದೆ ಪಟ್ಟಣದ ಆಜಾದ್ ನಗರದ ತಹಾ ಆಂಗ್ಲ ಮಾಧ್ಯಮ ಶಾಲೆಯಲ್ಲಿದ್ದು ಈ ಶಾಲೆಯು ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರಿಂದ ಇಲ್ಲಿನ ಮತಗಟ್ಟೆ ಸಂಖ್ಯೆ 36ರನ್ನು ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿಗೆ ಸ್ಥಳಾಂತರಿಸಲಾಗಿದ್ದು ಮತಗಟ್ಟೆ ಸಂಖ್ಯೆ 37ನ್ನು ಎಪಿಎಂಸಿ ಎದುರಿಗೆ ಇರುವ ಸಮುದಾಯ ಭವನದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಇದರ ಮಾಹಿತಿಯನ್ನು ಈ ಮತಗಟ್ಟೆಗಳ ಮತದಾರರಿಗೆ ಈ ಮೂಲಕ ತಿಳಿಸಲಾಗಿದೆ.
85ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲೇ ಮತಚಲಾಯಿಸಬಹುದು : 85ವರ್ಷ ಮೇಲ್ಪಟ್ಟ ನಿಶಕ್ತ ಮತದಾರರು ಹಾಗೂ ಅಂಗವೈಫಲ್ಯ ಮತದಾರರು ಮತಗಟ್ಟೆಗೆ ಬರಲು ಆಗದೇ ಇದ್ದುದರಿಂದ ಕೂಡ್ಲಿಗಿ ಕ್ಷೇತ್ರದಲ್ಲಿ 529ಗಂಡು,922ಹೆಣ್ಣು ಸೇರಿ 1451ಮಂದಿ 85ವರ್ಷ ಮೇಲ್ಪಟ್ಟ ಮತದಾರರಿದ್ದು, ಅಂಗ ವೈಫಲ್ಯ ಇರುವ ಗಂಡು -1512, ಹೆಣ್ಣು -1115 ಸೇರಿ ಒಟ್ಟು 2627 ಅಂಗವೈಫಲ್ಯ ಮತದಾರರಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಇಂತಹ ಮತದಾರರು ಸಹ ಮತದಾನದಿಂದ ವಂಚಿತರಾಗದಂತೆ ನಮೂನೆ 12ಡಿ ಪತ್ರದ ಮೂಲಕ ಮನೆಯಲ್ಲೇ ಮತದಾನ ಮಾಡುವ ಬಗ್ಗೆ ತಿಳಿಸಿದ ಸಹಾಯಕ ಚುನಾವಣಾಧಿಕಾರಿ ಡಾ ರಘು ಈಗಾಗಲೇ ಇದಕ್ಕೆ ಕೂಡ್ಲಿಗಿ ಪಟ್ಟಣದ 103ವಯಸ್ಸಿನ ಬಂಡೆಮ್ಮ ಎನ್ನುವ ವಯೋವೃದ್ದೆಗೆ ನಮೂನೆ 12ಡಿ  ಪತ್ರ ನೀಡುವ ಮೂಲಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಚುನಾವಣಾ ಮಾದರಿ ನೀತಿಸಂಹಿತೆ ಸುಗಮ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಂಡಗಳ ರಚನೆ ಮಾಡಲಾಗಿದೆ ಎಂಸಿಸಿ ತಂಡ, ಕ್ಷಿಪ್ರ ಸಂಚಾರಿ (ಎಫ್ ಎಸ್ ಟಿ )ತಂಡ, ವಿಎಸ್ ಟಿ, ವಿವಿಟಿ, ವೆಚ್ಚ ಚಲನವಲನ ತಂಡ 22ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಚುನಾವಣಾ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದೂ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ನೀಡುವಲ್ಲಿ ಪೊಲೀಸ್, ಗೃಹರಕ್ಷಕದಳ, ಅರೆಸೇನಾ ಪಡೆ ಸಜ್ಜಾಗಿದೆ ಮೇ7ರಂದು ನಡೆಯುವ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಮತಗಟ್ಟೆ ಸುರಕ್ಷತೆ ಕಾಪಾಡುವ ಅಲ್ಲಿನ ವ್ಯವಸ್ಥೆ ಬಗ್ಗೆ  ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕ್ಷೇತ್ರದ ಸಹಾಯಕ  ಚುನಾವಣಾ ಅಧಿಕಾರಿಗಳು ತಿಳಿಸಿ 250ಮತಗಟ್ಟೆಗಳಲ್ಲಿ 201ಸಾಮಾನ್ಯ ಮತಗಟ್ಟೆಗಳಾಗಿದ್ದು ಉಳಿದ 49ಮತಗಟ್ಟೆಗಳು ಸೂಕ್ಷ್ಮ ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಹಸೀಲ್ದಾರ್ ರಾಜು ಫಿರಂಗಿ ಮಾತನಾಡಿ ಕೂಡ್ಲಿಗಿ ಕ್ಷೇತ್ರದಲ್ಲಿ ನಾಲ್ಕು ಚೆಕ್ ಪೋಸ್ಟ್ ತೆರೆಯಲಾಗಿದ್ದು ಪ್ರತಿಯೊಂದು ವಾಹನಗಳ ತಪಾಸಣೆ ಮಾಡಲಾಗುತ್ತಿದ್ದೂ ಈಗಾಗಲೇ ಹೊಸಹಳ್ಳಿ ಸಮೀಪದ ಆಲೂರು ಕ್ರಾಸ್ ಚೆಕ್ ಪೋಸ್ಟ್ ಹಾಗೂ ಗುಡೇಕೋಟೆ ಸಮೀಪದ ಡಿ ಸಿದ್ದಾಪುರ ಚೆಕ್ ಪೋಸ್ಟ್ ನಲ್ಲಿ ನೇಮಿಸಿದ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಯಾವುದೇ ದಾಖಲು ಇಲ್ಲದ ನಗದು ಹಣ ಹಾಗೂ ಸೀರೆಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ತಹಸೀಲ್ದಾರ್ ತಿಳಿಸಿದರು. ಅಲ್ಲದೆ ಪತ್ರಕರ್ತ ಸಹಕಾರ ಚುನಾವಣಾ ಸಂದರ್ಭದಲ್ಲಿ ಅಗತ್ಯವಾಗಿದ್ದು ಶಾಂತಿ ಸುವ್ಯವಸ್ಥಿತ ಚುನಾವಣೆಗೆ ನಿಮ್ಮಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.