ಕೊನೆಭಾಗಕ್ಕೆ ತಲುಪದ ಭದ್ರಾನೀರು; ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ.25; ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ 4 ದಿನ ಕಳೆದರೂ ದಾವಣಗೆರೆ ತಾಲೂಕಿನ ಭಾಗಕ್ಕೆ ಇಂದಿಗೂ ನೀರು ಬರದ ಹಿನ್ನೆಲೆಯಲ್ಲಿ ನಗರದ ಹೊರ ವಲಯದ ಕುಂದುವಾಡ ಗ್ರಾಮದ ಬಳಿ ಭದ್ರಾ ಕಾಲುವೆಗೆ ಇಳಿದು ರೈತರು ಪ್ರತಿಭಟನೆ ನಡೆಸಿದರು.ನಗರದ ಹೊರ ವಲಯದ ಕುಂದುವಾಡ ಗ್ರಾಮದ ಭದ್ರಾ ಕಾಲುವೆಗೆ ರೈತ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಇಳಿದ ರೈತರು ಭದ್ರಾ ಅಚ್ಚುಕಟ್ಟು ಭಾಗಕ್ಕೆ ಅದರಕ್ಕೂ ಕೊನೆಯ ಭಾಗಕ್ಕೆ ಈವರೆಗೆ ನೀರು ತಲುಪದ ಬಗ್ಗೆ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ಬಿ.ಎಂ.ಸತೀಶ, ಭದ್ರಾ ನೀರಾವರಿ ಸಲಹಾ ಸಮಿತಿ(ಐಸಿಸಿ) ಕೈಗೊಂಡ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ನಾಲೆಗೆ ನೀರು ಬಿಟ್ಟು ನಾಲ್ಕು ದಿನ ಕಳೆದರೂ ಈವರೆಗೆ ಕೊನೆ ಭಾಗಕ್ಕೆ ನೀರು ಬಂದಿಲ್ಲ. ಸರ್ಕಾರ, ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಭದ್ರಾ ಅಚ್ಚುಕಟ್ಟು ರೈತರು ಇಂತಹ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ತೀವ್ರ ಜಲ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು.ಐಸಿಸಿ ಸಭೆಯಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭಾಗವಹಿಸಿ, ಜಿಲ್ಲೆಗೆ ಸಿಗಬೇಕಾದ ನೀರನ್ನು ಕೊಡಿಸುವ ಕೆಲಸ ಮಾಡಬೇಕಿತ್ತು. ಭದ್ರಾ ಅಣೆಕಟ್ಟೆಯ ಶೇ.70ರಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿರುವ ಜಿಲ್ಲೆ ನಮ್ಮದು. ಈ ಎಲ್ಲಾ ವಿವರ ನೀಡಿ, ಅಂಕಿ ಅಂಶಗಳ ಸಮೇತ ವಾದ ಮಂಡಿಸಿ, ನೀರು ಬಿಡಿಸುವ ಪ್ರಮಾಣ ಮತ್ತು ಅವದಿಯನ್ನು ಲೆಕ್ಕಾಚಾರದಂತೆ ವೇಳಾಪಟ್ಟಿ ನಿಗದಿಪಡಿಸಬೇಕಿತ್ತು. ಆದರೆ, ಅಂತಹ ಕೆಲಸ ಮಾಡಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು. ಸಚಿವರ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯಿಂದಾಗಿ ಐಸಿಸಿ ಸಭೆಗೆ ಗೈರು ಹಾಜರಾಗಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರಕ್ಕೆ ಕಾರಣವಾಗಿದ್ದಾರೆ. ನಾಲೆಗೆ ನೀರು ಬಿಟ್ಟು, 4 ದಿನವಾದರೂ ದಾವಣಗೆರೆ ತಾಲೂಕಿನ ಭಾಗಕ್ಕೆ ನೀರು ಬಂದಿಲ್ಲ. ಹೀಗಾದರೆ ಅಚ್ಚುಕಟ್ಟಿನ ರೈತರು ಬದುಕುವುದಾದರೂ ಹೇಗೆ? ಭೀಕರ ಬರದಿಂದಾಗಿ ರೈತರು ತತ್ತರಿಸಿದ್ದು, ನಾಲೆಗೆ ನೀರು ಬಿಟ್ಟರೆ ಒಂದಿಷ್ಟು ರೈತರಿಗೆ ಅನುಕೂಲವಾದರೂ ಆಗುತ್ತಿತ್ತು. ಆಳುವ ಜನ ಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು. ರೈತ ಮುಖಂಡ ಕುಂದುವಾಡದ ಜಿಮ್ಮಿ ಹನುಮಂತಪ್ಪ ಮಾತನಾಡಿ, ಕಳೆದ 10-20 ವರ್ಷದಿಂದ ಕಷ್ಟಪಟ್ಟು ಬೆವರು, ಹರಿಸಿ ಮಾಡಿದ ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನಾವು ರೈತರು ಅನ್ನ ಕೊಡುವವವರೇ ಹೊರತು, ಕನ್ನ ಹಾಕುವವರಲ್ಲ. ಸರ್ಕಾರವು ನೀರಿಲ್ಲದೇ ಕಂಗಾಲಾಗಿರುವ ನಮ್ಮ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಮೊದಲು ಅಚ್ಚುಕಟ್ಟಿನ ಕೊನೆಯಾಗಕ್ಕೆ ನೀರು ತಲುಪಿಸುವ ಕೆಲಸ ಮಾಡಲಿ. ಜಿಲ್ಲಾಡಳಿತ, ನೀರಾವರಿ ಇಲಾಖೆ ಏನು ಮಾಡುತ್ತಿವೆ ಎಂದು ಹರಿಹಾಯ್ದರು.ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ.ಗಣೇಶಪ್ಪ ಕುಂದುವಾಡ ಮಾತನಾಡಿ, ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಂದಿಲ್ಲ. ದನ ಕರುಗಳಿಗೆ ನೀವು, ಮೇವು ಸಹ ಇಲ್ಲದ ಸ್ಥಿತಿ ಇದೆ. ಮೇವುಇಲ್ಲದ ಕಾರಣಕ್ಕೆ ದನ ಕರುಗಳನ್ನು ಕೇಳಿದ ದರಕ್ಕೆ ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದೇವೆ. ನಮ್ಮ ಜಿಲ್ಲಾ ಸಚಿವರ ನಿರ್ಲಕ್ಷ್ಯದಿಂದಾಗಿ ರೈತರು ನೀರಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರವು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದರು.ಯುವ ರೈತ ಕುಂದುವಾಡ ಪುನೀತ್ ಮಾತನಾಡಿ, ಭದ್ರಾ ನೀರು ಬಾರದೇ, ತೋಟದ ಬೆಳೆಗಳು ಒಣಗುತ್ತಿವೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದೇ ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ. ಪಶು, ಪಕ್ಷಿಗಳಿಗೂ ನೀರು ಸಿಗದೇ, ಹಾಹಾಕಾರ ಎದ್ದಿದೆ. ಇನ್ನಾದರೂ ನೀರಾವರಿ ಇಲಾಖೆ, ಜಿಲ್ಲಾಡಳಿತಗಳು ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಮುಖಂಡರಾದ ಭಾಸ್ಕರ ರೆಡ್ಡಿ, ಅಣ್ಣಪ್ಪ, ಬಿ.ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣಹರಿಹರ, ಎಚ್.ಎನ್.ಮಹಾಂತೇಶ, ಎಚ್.ಎಸ್.ಸೋಮಶೇಖರ, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ ಇತರರು ಇದ್ದರು.