ಅಭಿಮಾನಿಗಳ ಪ್ರೀತಿಯಲಿ ಮುಳುಗಿದ “ಯುವ” ಚಿತ್ರ ತಂಡ
ಸಂಜೆವಾ|ಣಿ ವಾರ್ತೆ
ಹೊಸಪೇಟೆ ಮಾ24: ಮಾರ್ಚ್‌ 29ಕ್ಕೆ ‘ಯುವ’ ಸಿನಿಮಾ ಬಿಡುಗಡೆ. ಆದರೆ ಹೊಸಪೇಟೆಗೆ ಮಾತ್ರ 23ಕ್ಕೇ ಸಿನಿಮಾ ಬಿಡುಗಡೆಯಾದಂತೆ ಸಂಭ್ರಮಪಟ್ಟಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ‘ಅಪ್ಪು’ ಅಭಿಮಾನಿಗಳ ಒಕ್ಕೊರಲ ಪ್ರೀತಿಯಲ್ಲಿ ಮುಳುಗೆದ್ದ ಚಿತ್ರತಂಡ, ಯುವರಾಜ್‌ಕುಮಾರ್‌ಗೆ ಸಹ ಇದೇ ಪ್ರೀತಿ ತೋರಿಸಿ ಎಂದು ಕೋರಿಕೆ ಸಲ್ಲಿಸಿತು.
ಶನಿವಾರ ಸಂಜೆ ಇಲ್ಲಿನ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ನಡುವೆ ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಯುವ’ ಸಿನಿಮಾದ ಬಿಡುಗಡೆಪೂರ್ವ ಅದ್ಧೂರಿ ಸಮಾರಂಭ ‘ಯುವ ಸಂಭ್ರಮ’  ನಡೆಯಿತು. ಅನುಶ್ರೀ ಅವರ ಅರಳು ಹುರಿದಂತಹ ಸಂಭಾಷಣೆಯ ನಡುವೆ ಇಡೀ ಚಿತ್ರತಂಡ ಒಬ್ಬೊಬ್ಬರಾಗಿ ವೇದಿಕೆಗೆ ಬಂದು ಚಿತ್ರದ ತಮ್ಮ ಅನುಭವ ಹಂಚಿಕೊಂಡರು. ವಿಜಯ ಪ್ರಕಾಶ್ ಅವರ ಕಂಚಿನ ಕಂಠದ ಗಾಯನ, ರಾಘವೇಂದ್ರ ರಾಜ್‌ಕುಮಾರ್ ಅವರ ಹಿತನುಡಿಯಲ್ಲಿ ಮಿಂದೆದ್ದ ಪ್ರೇಕ್ಷಕರು ಚಿತ್ರ ಯಶಸ್ವಿಯಾಗುವ ಮುನ್ಸೂಚನೆ ನೀಡಿಬಿಟ್ಟರು.
ರಾಘಣ್ಣ ಅವರು ವಿನಯ್‌ ರಾಜ್‌ಕುಮಾರ್ ಜತೆಗೆ ವೇದಿಕೆಗೆ ಬರುತ್ತಿದ್ದಂತೆಯೇ ಒಂದು ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿಬಿಟ್ಟಿತು. ಏಕೆಂದರೆ ಅವರು ಮಾತು ಆರಂಭಿಸಿದ್ದೇ ಪುನೀತ್ ರಾಜ್‌ಕುಮಾರ್ ಮೂಲಕ. ಹೊಸಪೇಟೆಗೂ, ಅಪ್ಪುಗೂ ಇದ್ದ ಅವಿನಾಭಾವ ಸಂಬಂಧವನ್ನು ಹೇಳುತ್ತಲೇ, ಯುವರಾಜ್‌ಕುಮಾರ್‌ನ ಸಿನಿಮಾವನ್ನು ಅಪ್ಪು ಸಾಯುವುದಕ್ಕೆ ಒಂದು ವಾರ ಮೊದಲಷ್ಟೇ ಹೊಂಬಾಳೆ ಫಿಲಂಸ್‌ಗೆ ವಹಿಸಿದ ಘಟನೆಯನ್ನು ನೆನಪಿಸಿ ಭಾವುಕರಾದರು. ಪ್ರೇಕ್ಷಕರು ಸಹ ಮೌನಕ್ಕೆ ಜಾರಿದರು.
‘ಯುವ ರಾಜ್‌ಕುಮಾರ್‌ಗೆ ನನ್ನ ಮಗ ಅಲ್ಲ, ಅವನು ಪುನೀತ್‌ ಮಗ, ಅವನ ‌ಅಮ್ಮ ಅಶ್ವಿನಿ. ಮಗನೆ, ನೀನು ಯಶಸ್ಸಿನ ಮೆಟ್ಟಿಲು ಏರುತ್ತಿ ನಿಜ, ಆದರೆ ನಿನಗೆ ದಾರಿದೀ‍ಪ ಏನಿದ್ದರೂ ಪುನೀತ್‌ ಆದರ್ಶ. ಆತನ ಸರಳತೆ, ವಿನಯತೆ, ವಿಧೇಯತೆಯ ಗುಣ ನಿನ್ನಲ್ಲೂ ಕಾಣಿಸಲಿ ಎಂಬುದೇ ನನ್ನ ಆಶಯ’ ಎಂದು ಹೇಳಿದಾಗ ಅಲ್ಲಿ ಅಪ್ಪು ಮೇಲಿನ ಪ್ರೀತಿಯ ಹೊಳೆಯೇ ಹರಿದಿತ್ತು. ಯುವರಾಜ್‌ಕುಮಾರ್ ಅವರೂ ತಾವೊಬ್ಬ ಭರವಸೆಯ, ಉದಯೋನ್ಮುಖ ನಟ ಎಂಬುದನ್ನು ತಮ್ಮ ಮಾತು, ಕೃತಿಗಳ ಮೂಲಕವೇ ತೋರಿಸಿಕೊಟ್ಟರು.
ನಿರ್ದೇಶಕ ಸಂತೋಷ್‌ ಆನಂದ್‌, ನಟರಾದ ಅಚ್ಚುತ್‌ ಕುಮಾರ್, ಸುಧಾರಾಣಿ ಸಹಿತ ಹಲವು ಕಲಾವಿದರು, ತಂತ್ರಜ್ಞರು ‘ಯುವ’ ಸಿನಿಮಾ ನಿರ್ಮಾಣದ ತಮ್ಮ ಅನುಭವ ಹಂಚಿಕೊಂಡರು. ಭಾವನಾ ಸಹಿತ ಕೆಲವು ಕಲಾವಿದರ ನೃತ್ಯ ಪ್ರೇಕ್ಷಕರನ್ನು ರಂಜಿಸಿತು9. ಡಿಆರ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯವರು ಕಾರ್ಯಕ್ರಮ ಸಂಘಟಿಸಿದರು.
ಪುನೀತ ನಮನ
‘ಯುವ’ ಸಿನಿಮಾ ಹೆಸರಿಗೆ ಮಾತ್ರ ಎಂಬಂತಿತ್ತು. ಅಲ್ಲಿ ಅಪ್ಪು ಅಬಿಮಾನವೇ ತುಂಬಿ ತುಳುಕುತ್ತಿತ್ತು. ವಿಜಯ ಪ್ರಕಾಶ್‌ ಮತ್ತು ಇತರ ಕಲಾವಿದರು ಅಪ್ಪು ನೆನೆದು ಹಾಡು ಹಾಡುತ್ತಿದ್ದಾಗ ಸಾವಿರಾರು ಮೊಬೈಲ್‌ಗಳಲ್ಲಿ ದೀಪಗಳು ಬೆಳಕಿ ನಕ್ಷತ್ರದಂತೆ ಮಿನುಗಿದವು. ‘ನನಗೆ ಇದು ಯುವ ಸಿನಿಮಾ ಬಿಡುಗಡೆ ಪೂರ್ವ ಸಮಾರಂಭಕ್ಕೆ ಬಂದಂತಹ ಅನುಭವವೇ ಆಗುತ್ತಿಲ್ಲ, ಬದಲಿಗೆ ಅಪ್ಪು ಸಿನಿಮಾ ಬಿಡುಗಡೆ ಎಂಬಂತೆ ತೋರುತ್ತಿದೆ, ಅಪ್ಪುವೇ ಇಲ್ಲಿ ಎಲ್ಲೋ ಕುಳಿತಂತೆ ಭಾಸವಾಗುತ್ತಿದೆ’ ಎಂದು ರಾಘಣ್ಣ ಹೇಳಿದರು.