ರಾಜ್ಯದ 28 ಲೋಕಸಭೆ ಸ್ಥಾನಗಳಲ್ಲಿ ಆರ್.ಪಿ.ಐ ಸ್ಪರ್ಧೆ: ಡಾ. ಎನ್. ಮೂರ್ತಿ
ವಿಜಯಪುರ:ಮಾ.24:ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಢಾನಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಪೂರ್ವ ತಯಾರಿಗಾಗಿ 7 ರಾಜ್ಯಗಳಲ್ಲಿ ಈಗಾಗಲೇ ಪ್ರವಾಸ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1ನೇ ಹಂತವಾಗಿ ಮಾ.18 ರಿಂದ ಏ.1 ರವರೆಗೆ 13 ಜಿಲ್ಲೆಯಲ್ಲಿ ಕೈಗೊಂಡಿರುವ “ಭೀಮಜಾಥ” ತಂಡದ ಪ್ರವಾಸ ಪಟ್ಟಿಯನ್ನು ಮಾ.12ರಂದು ಬೆಂಗಳೂರು ಗಾಂಧಿ ಭವನದಲ್ಲಿ ನಡೆದ ಬೆಂಗಳೂರು ಆರ್.ಪಿ.ಐ. (ಬಿ) ಮತ್ತು ದ.ಸಂ.ಸ. ಸಂವಿಧಾನ ಜಾರಿ ಆಂದೋಲನ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.
ಸ್ವಾತಂತ್ರ್ಯ ನಂತರ ಏಳೂವರೆ ದಶಕಗಳ ದೀರ್ಘಕಾಲ ದೇಶವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ದೇಶದ ಸಂವಿಧಾನದ ಆಶಯಗಳನ್ನು ಜಾರಿ ಮಾಡಲಿಲ್ಲ. ಇವರ ಆಡಳಿತಾವಧಿಯಲ್ಲಿ ಕೋಮು ಮತ್ತು ಜಾತಿವಾದ ಸ್ವಜನ ಪಕ್ಷಪಾತ, ವಂಶಾಡಳಿತ ಹಾಗೂ ತೀವ್ರ ಭ್ರಷ್ಟಾಚಾರ. ಭಯೋತ್ಪಾದನೆಯಿಂದ ದೇಶ ಬಸವಳಿದಿದೆ ಎಂದು ತಿಳಿಸಿದರು.
ಹೆಚ್ಚಳವಾದ ಕೋಮುಗಲಭೆ, ದುಬಾರಿ ಜಿಎಸ್.ಟಿ. ತೆರಿಗೆ, ಬೆಲೆ ಏರಿಕೆಯಿಂದ ನಾಗರಿಕರ ಜೀವನ ದುಸ್ತರವಾಗಿದೆ. ಬಂಡವಾಳಶಾಹಿಗಳು ಮತ್ತು ಭೂಮಾಲೀಕರ ಹಣ ದುಪ್ಪಟ್ಟಾಗಿ ಶ್ರೀಮಂತರು ಮತ್ತು ಬಡವರ ಅಂತರ ಹೆಚ್ಚಳವಾಗಿದೆ ಎಂದು ಹೇಳಿದರು.
ದೇಶದಲ್ಲಿನ ಸ್ಥಳೀಯ ಸಣ್ಣ ಉದ್ಯಮ, ಕೈಗಾರಿಕೆಗಳು ನೆಲ ಕಚ್ಚಿವೆ. ಕೃಷಿ ಉತ್ಪನ್ನ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಜನ ಗುಳೆ ಹೋಗುತ್ತಿದ್ದಾರೆ. ಜಾನುವಾರುಗಳಿಗೆ ಮೇವಿಲ್ಲ. ನಿರುದ್ಯೋಗ ಮತ್ತು ಬಡತನದಿಂದ ದೇಶ ತಲ್ಲಣಿಸಿದೆ ಎಂದರು.
ಭಾರತ ದೇಶದ ಸಾಲ 2025ಕ್ಕೆ 188 ಲಕ್ಷ ಕೋಟಿಯಾಗಿದೆ. ರಾಜ್ಯದ ಸಾಲ 5.65 ಲಕ್ಷ ಕೋಟಿಯಾಗಿದೆ. ಶ್ರೀಮಂತರ 14.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಬಂಡವಾಳಿಗರ ತೆರಿಗೆ ಇಳಿಸಿದೆ. ವಜ್ರ, ಚಿನ್ನ, ಬೆಳ್ಳಿ ತೆರಿಗೆ ಇಳಿಸಿದೆ. ಹಾಲು, ಮೊಸರು, ಪುಸ್ತಕ, ಪೆನ್ನು, ಆಹಾರ ಧಾನ್ಯ, ಅಡುಗೆ ಸಿಲಿಂಡರ್, ಡೀಸೆಲ್, ಪೆಟ್ರೋಲ್, ರಸಗೊಬ್ಬರ ಬೆಲೆ ಮತ್ತು ತೆರಿಗೆ ಹೆಚ್ಚಿಸಿದೆ ಎಂದು ಟೀಕಿಸಿದರು.
ಆದ್ದರಿಂದ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ದೇಶದ ಭವಿಷ್ಯ ಮತ್ತು ದೇಶ ಹಾಗೂ ಸಂವಿಧಾನ ರಕ್ಷಣೆಯನ್ನು ಮನಗಂಡು ಪ್ರಭುದ್ಧತೆಯಿಂದ ಮತ ಚಲಾಯಿಸಲು ಕರೆ ನೀಡಿದರು. ಹಣ, ಮದ್ಯ, ಜಾತಿ, ಕೋಮುಭಾವನೆಗೆ ಬಲಿಯಾಗದೆ ಜಾಗೃತವಾಗಿರಲು ಮನವಿ ಮಾಡಿದರು.
ಆರ್.ಪಿ.ಐ. (ಬಿ) ದೇಶ ಮತ್ತು ಸಂವಿಧಾನ ರಕ್ಷಣೆ ಜಾರಿಗಾಗಿ ಶ್ರಮಿಸುತ್ತದೆ. ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ರಾಷ್ಟ್ರನಾಯಕರ ತತ್ವ ಸಿದ್ಧಾಂತ ಮತ್ತು ಆದರ್ಶಗಳಲ್ಲಿ ನಂಬಿಕೆ ಇಟ್ಟಿದೆ. ರಾಜ್ಯದಲ್ಲಿ 5 ದಶಕಗಳ ಕಾಲ ‘ ನಿಷ್ಠೆ ಮತ್ತು ನಿರಂತರ ಸೇವೆ ಸಲ್ಲಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲ ವ್ಯಕ್ತಪಡಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ, ಅಶೋಕ ಕರೆಕಲ್ಲ, ಪ್ರಧಾನ ಕಾರ್ಯದರ್ಶಿ ಶರಣು ದೊಡಮನಿ, ಮದನಕುಮಾರ ನಾಗರದಿನ್ನಿ, ಜಿಲ್ಲಾ ಕಾರ್ಯಾದ್ಯಕ್ಷರು, ಅಶೋಕ ನಡುವಿನಮನಿ, ಎಸ್.ಎಸ್. ಕಂಟೆಗೌಡ್ರು, ಶಿವಾನಂದ ಮಾದರ, ಮಾರುತಿ ಮಾದರ, ಯಮನಪ್ಪ ಹುಕ್ಕೇರಿ, ಭರತ ಉಕ್ಕಲಿ, ಪರಸು ಸಂದಿಮನಿ, ಜಗದೀಶ ದಳಪತಿ, ಭೀಮರಾಯ ಜಿಗಜಿಣಗಿ, ಅನಿಲ ರತ್ನಾಕರ, ಸಿದ್ದು ದೊಡಮನಿ ಮತ್ತಿತರರು ಉಪಸ್ಥಿತರಿದ್ದರು.