ಮಹಾತ್ಮರು ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲಾ:ಗುಂಡಕನಾಳಶ್ರೀ
ತಾಳಿಕೋಟೆ:ಮಾ.24: ರೇಣುಕಾದಿ ಪಂಚಾಚಾರ್ಯರು ಕೇವಲ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗಿರದೆ, ಎಲ್ಲ ಧರ್ಮದ ಎಲ್ಲ ಜಾತಿ-ಜನಾಂಗಗಳ ದೈವತ್ವವಾಗಿ ಅವರಿಗೆ ಒಳ್ಳೆಯದನ್ನೇ ಕರುಣಿಸಿದ್ದಾರೆ ಇದರಿಂದ ಇಂದು ಬಹುತೇಕ ಎಲ್ಲ ಜಾತಿ ಜನಾಂಗದ ಆದಿ ಗುರುವಾಗಿ ರೇಣುಕಾಚಾರ್ಯರನ್ನು ಪೂಜಿಸುತ್ತಿದ್ದಾರೆಂದು ಗುಂಡಕನಾಳ ಬೃಹನ್ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಶನಿವಾರರಂದು ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಜಂಗಮ ಸಮಾಜ ಬಾಂದವರ ನೇತೃತ್ವದಲ್ಲಿ ವಿವಿಧ ಸಮಾಜ ಬಾಂದವರ ಸಹಯೋಗದೊಂದಿಗೆ ಏರ್ಪಡಿಸಲಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಮ್ಮ ನಾಡಿನಲ್ಲಿ ಅನೇಕ ಮಹಾತ್ಮರು ಜನಿಸಿದ್ದಾರೆ ಅಂತಹ ಮಹಾತ್ಮರಲ್ಲಿಯೇ ವಿಶಿಷ್ಠವಾಗಿ ಎಲ್ಲ ಧರ್ಮದವರಿಗೆ ಒಳಿತನ್ನು ಬಯಸುವದರೊಂದಿಗೆ ಸನ್ಮಾರ್ಗದ ದಾರಿಯನ್ನು ತೋರಿಸಿಕೊಟ್ಟವರು ಸದ್ಗುರು ಶ್ರೀ ರೇಣುಕಾಚಾರ್ಯರು ಆಗಿದ್ದಾರೆ ಶ್ರೀ ಜಗದ್ಗುರು ರೇಣುಕಾಚಾರ್ಯರು ತ್ರಿಲಿಂಗ ದೇಶವಾದ ತೆಲಂಗಾಣ ರಾಜ್ಯದ ಕೊಲ್ಲಿಪಾಕಿಯ ಸ್ವಯಂಭು ಸೋಮೇಶ್ವರ ಲಿಂಗದಿಂದ ಅವತರಿಸಿಬಂದವರಾಗಿದ್ದಾರೆ ಅಸೇತು ಹಿಮಾಚಲ ಪರಿಯಂತರ ಲೋಕ ಸಂಚಾರ ಮಾಡಿ ವೀರಶೈವ ಮಹಾಮತವನ್ನು ಸ್ಥಾಪನೆ ಮಾಡಿ ಸಮಾಜ ಉದ್ಧಾರ ಮಾಡಿದ ಜಗದ್ಗುರು ರೇಣುಕರು ಮಲಯಾಚಲ ಪ್ರದೇಶದ ಭದ್ರಾ ನದಿಯ ತೀರದಲ್ಲಿ ಶ್ರೀ ಅಗಸ್ತ್ಯ ಮಹರ್ಷಿಗೆ ಶಿವ ಸಿದ್ದಾಂತವನ್ನು ಬೋಧಿಸಿ ರಂಭಾಪುರಿ ಪೀಠವನ್ನು ಸ್ಥಾಪಿಸಿದ ಜಗದ್ಗುರುಗಳು ಯಾವುದೇ ಜಾತಿ ಮತ ಧರ್ಮ ಅನ್ನದೇ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಘೋಷವಾಕ್ಯದೊಂದಿಗೆ ಧರ್ಮೋದ್ದಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಮನುಷ್ಯನಿಗೆ ಪ್ರಪ್ರಥಮವಾಗಿ ಕೃಷಿ ಧರ್ಮವನ್ನು ಕಲಿಸಿದ ಜಗದ್ಗುರುಗಳು ರೇಣುಕಾಚಾರ್ಯರು ಎಂದರೆ ತಪ್ಪಾಗಲಾರದು, ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ರಂಭಾಪುರಿ ಪೀಠವು ಹಸಿರು ಧ್ವಜವನ್ನು ಹೊಂದಿ ಕೃಷಿ ಕಾಯಕಕ್ಕೆ ಪ್ರೇರಣೆ ನೀಡಿ ಹಸಿರೇ ಉಸಿರು ಎನ್ನುವ ಧರ್ಮ ಸಂದೇಶವನ್ನು ನೀಡಿದ ಜಗದ್ಗುರುಗಳ ಜಯಂತಿಯನ್ನು ಯುಗಮಾನೋತ್ಸವವೆಂದು ಆಚರಿಸಲಾಗುತ್ತದೆ ಕಾರಣ ಅವರು ಲಂಕಾ ಪಟ್ಟಣದಲ್ಲಿ ರಾವಣನ ಆಸೆಯಂತೆ ಮೂರು ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಿ ರಾವಣನ ಆತ್ಮಕ್ಕೆ ಶಾಂತಿ ನೀಡಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಇಂತಹ ಮಹಾತ್ಮರ ಜಯಂತಿಯನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬರುವದರೊಂದಿಗೆ ಸದ್ಗುರು ರೇಣುಕಾಚಾರ್ಯರ ಇತಿಹಾಸವನ್ನು ಸಮಾಜಗಳಿಗೆ ಪರಿಚಯಿಸುತ್ತಿರುವದು ಪ್ರಶಂಶನೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸುಮಂಗಲೆಯರ ಕುಂಭ ಕಳಸದೊಂದಿಗೆ ಸದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಹಾ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯು ಗ್ರಾಮದ ಶ್ರೀ ಗ್ರಾಮದೇವತೆ ದೇವಸ್ಥಾನದಿಂದ ಪ್ರಾರಂಭಗೊಂಡು ಶ್ರೀ ಅಲ್ಲಮಪ್ರಭು ದೇವಸ್ಥಾನದ ವರೆಗೆ ವಿವಿಧ ವಾಧ್ಯವೈಭವಗಳೊಂದಿಗೆ ಜರುಗಿತು.
ಇದೇ ಸಮಯದಲ್ಲಿ ಗ್ರಾಮದ ಸದ್ಭಕ್ತರವತಿಯಿಂದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಮುಖಂಡರುಗಳಾದ ಶಿವಾನಂದ ಹಿರೇಮಠ, ಪ್ರಭುದೇವ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ವಿವೇಕಾನಂದ ಹಿರೇಮಠ, ಗುರುಮೂರ್ತಿ ಹಿರೇಮಠ, ಅಂಬ್ರಯ್ಯ ಹಿರೇಮಠ, ಮಧುಗೌಡ ಪಾಟೀಲ, ನಾನಾಗೌಡ ಅನಂತರಡ್ಡಿ, ಮಲ್ಲನಗೌಡ ಕಾರಲಕುಂಟಿ, ಬಸವಂತ್ರಾಯ ಚಿಂಚೋಳಿ, ಕರಣಗೌಡ ವಠಾರ, ಮುದಕನಗೌಡ ದೊಡಮನಿ, ಪ್ರಭುಗೌಡ ಅನಂತರಡ್ಡಿ, ನಿಂಗನಗೌಡ ಅನಂತರಡ್ಡಿ, ಶಕುಗೌಡ ರಾರಡ್ಡಿ, ಪ್ರಭುಗೌಡ ಗುರಡ್ಡಿ ಒಳಗೊಂಡು ಜಂಗಮ ಸಮಾಜದ ಮುಖಂಡರುಗಳು, ಮಹಿಳೆಯರು ಪಾಲ್ಗೊಂಡಿದ್ದರು.
ಗುರುಸ್ವಾಮಿ ಹಿರೇಮಠ ಸ್ವಾಗತಿಸಿದರು. ಶ್ರೀಶೈಲ ಹಿರೇಮಠ ನಿರೂಪಿಸಿದರು. ಕಿರಣ ಹಿರೇಮಠ ವಂದಿಸಿದರು.