ಬೀದರ್ ಜಿಲ್ಲೆಯಿಂದ ವಿಜಯಕುಮಾರ ಪಾಟೀಲ ಕಣಜಿಕರ್ ಕಣಕ್ಕೆ: ವಿ.ಎಸ್ ಶಾಮಸುಂದರ
ಬೀದರ್: ಮಾ.24:ಲೋಕಸಭೆ ಚುನಾವಣೆಗಾಗಿ ರಾಜ್ಯದ 9 ಕಡೆ ರಾಷ್ಟ್ರೀಯ ಮರಾಠಾ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಿರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಮರಠಾ ಪಕ್ಷದ ಉಪಾಧ್ಯಕ್ಷ ವಿ.ಎಸ್ ಶಾಮಸುಂದರ ತಿಳಿಸಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯದ ಅತಿ ಹೆಚ್ಚು ಮರಾಠಿಗರು ಇರುವ ಕಡೆಗಳಾದ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಶಾಮಸುಂದರ ಗಾಯಕವಾಡ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಧಾರವಾಡಕ್ಕೆ ಜಿ.ಡಿ ಘೋರ್ಪಡೆ, ಹಾವೇರಿಯಲ್ಲಿ ನಾರಾಯಣರಾವ ಗಾಯಕವಾಡ, ಬೆಳಗಾವಿಯಲ್ಲಿ ನ್ಯಾಯವಾದಿ ಈಶ್ವರ ರುದ್ರಪ್ಪ ಗಾಡಿ, ಚಿಕ್ಕೋಡಿಯಲ್ಲಿ ವಿನೋದ ಸಾಳುಂಕೆ, ಬೀದರ್ ಲೋಕಸಭೆ ಚುನಾವಣೆಯಲ್ಲಿ ವಿಜಯಕುಮಾರ ಪಾಟೀಲ ಕಣಜಿಕರ್, ಬಾಗಲಕೋಟೆಗೆ ಶ್ರೀಕಾಂತ ಮುಧೋಳ, ಶಿವಮೊಗ್ಗ ಕ್ಷೇತ್ರಕ್ಕೆ ದೇವರಾಜ ಶಿಂಧೆವಿಜಯಪುರ ಹಾಗೂ ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಎಸ್.ಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೆಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯದಲ್ಲಿ ಮರಾಠಿಗರಿಗೆ ಅನ್ಯಾಯ ಮಾಡಿದೆ: ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಮರಠಿಗರಿಗೆ ಘೋರ ಅನ್ಯಾಯ ಮಾಡಿದ್ದು, 28 ಲೋಕಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲೂ ಸಹ ನಮ್ಮ ಸಮಾಜಕ್ಕೆ ಟಿಕೇಟ್ ನೀಡಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ತಾನು ಅಧಿಕಾರಕ್ಕೆ ಬಂದರೆ ಮರಠಿಗರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದಾಗಿ, ನಮ್ಮ ಸಮಾಜಕ್ಕೆ 2ಎ ಮಾನ್ಯತೆ ನೀಡುವುದಾಗಿ ಹೇಳಿ ಮಾತು ತಪ್ಪಿದರು. ನಮ್ಮ ಮತಗಳನ್ನು ಪಡೆದು ರಾಜಕೀಯ ಮಾಡಲು ಹೊರಟಿರುವ ಬಿಜೆಪಿಗರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್‍ನವರು ಕನಿಷ್ಟ ರಾಜ್ಯ ಮಂತ್ರಿ ಮಂಡಳದಲ್ಲಿ ನಮ್ಮ ಸಮಾಜದ ಸಂತೋಷ ಲಾಡ್‍ಗೆ ಒಳ್ಳೆಯ ಹುದ್ದೆ ನೀಡಿ ಗೌರವಿಸಿದ್ದಾರೆ ಎಂದರು.
ಯಾವುದೇ ಕಾರಣಕ್ಕೂ ಎಂ.ಇ.ಎಸ್‍ಗೆ ಬೆಂಬಲಿಸುವುದಿಲ್ಲ: ನಾವು ನೆಲದ ಮಣ್ಣಿನ ಮಕ್ಕಳು. ಈ ನೆಲ, ಜಲಕ್ಕಾಗಿ ನಮ್ಮ ತ್ಯಾಗ ಸದಾ ಇದ್ದೆ ಇರುತ್ತದೆ. ಯಾವುದೇ ಕಾರಣಕ್ಕೂ ನಾವು ಮರಾಠಾ ಏಕಿಕರಣ ಸಮಿತಿ ಜೊತೆ ಕೈ ಜೋಡಿಸುವುದಿಲ್ಲ. ಮಹಾಜನ ವರದಿ ಸರ್ವೊಚ್ಛ ನ್ಯಾಯಾಲಯದಲ್ಲಿದ್ದು, ತೀರ್ಪು ಏನೆ ಬಂದರೂ ಅದನ್ನು ಗೌರವಿಸುತ್ತೇವೆ. ಈ ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಮಖ್ಯೆ ಹೊಂದಿರುವ ನಮಗೆ ರಾಜ್ಯದಲ್ಲಿ ಪ್ರಾತಿನಿಧ್ಯ ದೊರೆಯದೇ ಇರುವುದು ವಿಪರ್ಯಾಸ ಎಂದರು.
ಸಮಾಜದ ಸರ್ವಾಂಗಿಣ ವಿಕಾಸಕ್ಕಾಗಿ, ನಮ್ಮ ಮಕ್ಕಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಉತ್ತಮ ಶಿಕ್ಷಣ, ತರಬೇತಿ ಕೊಡುವುದು ನಮ್ಮ ಮುಖ್ಯ ಗುರಿ. ಎಲ್ಲ ಕ್ಷೇತ್ರಗಳಲ್ಲಿ ಇಂದು ನಮ್ಮ ಜನ ಗುರ್ತಿಸಿದ್ದಾರೆ. ಆದರೆ, ರಾಜ್ಕೀಯ ಪ್ರಾತಿನಿಧ್ಯ ನೀಡುವಲ್ಲಿ ಎಲ್ಲ ಪಕ್ಷಗಳು ಪ್ರಮಾದ ಎಸಗಿವೆ. ಈ ಕಾರಣಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮಾಜದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.
ಜನರ ಸೇವೆಯೇ ನನ್ನ ಪರಮೋದ್ದೇಶ: ಕಣಜಿಕರ್:- ಈ ಹಿಂದೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕನಾಗಿ ಸಹಕಾರ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡಿರುವ ತೃಪ್ತಿ ನನಗಿದ್ದು, ರಾಜಕೀಯವಾಗಿ ಸಹ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 1989ರಲ್ಲಿ ಆಗಿನ ಶಾಸಕ ದಿ.ಕಲ್ಯಾಣರಾವ ಮೊಳಕೆರೆ ಅವರ ಪರ ಕೆಲಸ ಮಾಡಿ ಗೆಲ್ಲಿಸಿ ತರುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಸಾರಿ ತಾನು ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಭಗವಂತ ಖೂಬಾ ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿದ್ದರೆ ಕಾಂಗ್ರೆಸ್‍ನಿಂದ ಸಾಗರ ಖಂಡ್ರೆ ಇನ್ನು ಹಸುಳೆ ಬಾಲಕ. ಹಾಗಾಗಿ ನನಗೆ ನಮ್ಮ ಸಮಾಜ ಅಷ್ಟೆ ಅಲ್ಲ ಎಲ್ಲ ಧರ್ಮಿಯರ, ಎಲ್ಲ ಜಾತಿ ಜನಾಂಗದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ನನಗೆ ಲೋಕಸಭೆಯಲ್ಲಿ ಮತದಾರರು ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದರು.
ಸಮಾಜದ ಮುಖಂಡರು ಹಾಗೂ ನಿವೃತ್ತ ಪ್ರಾಚಾರ್ಯರಾದ ಗೋವಿಂದರಾವ ಜಾಧವ ಪತ್ರಿಕಾಗೋಷ್ಟಿಯಲ್ಲಿದ್ದರು.