ಶಾಸಕರು ಗೆಲ್ಲಿಸಿದರಷ್ಟೇ ನನ್ನ ಗೆಲುವು ಸಾಧ್ಯ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.24:- ಲೋಕಸಭಾ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ಕ್ಷೇತ್ರ ಸುತ್ತಾಡಿ ಮತದಾರರನ್ನು ಗೆದ್ದರಷ್ಟೇ ನನ್ನ ಗೆಲುವು ಸಾಧ್ಯ ಆಗಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ?ಮಣ್ ಹೇಳಿದರು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರೊಂದಿಗೆ ಮಾದ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ 8 ವಿಧಾನಸಭಾಕ್ಷೇತ್ರಗಳಲ್ಲಿ ಮೂವರು ಹಾಲಿಗಳಿದ್ದು, ನನ್ನ ಪಾಲಿಗೆ ಮಾಜಿಗಳು ಹಾಲಿಗಳಂತೆಯೇ ಇದ್ದಾರೆ. ಪ್ರಚಾರವೂ ಸೇರಿ ನಾನು ಯಾವುದೇ ಕ್ಷೇತ್ರದಲ್ಲಿ ಎನೂ ಮಾಡಬೇಕಾದರೂ ಆ ಭಾಗದ ಹಾಲಿ ಅಥವಾ ಮಾಜಿಗಳ ಅನುಮತಿ ಹಾಗೂ ಅವರನ್ನು ಕರೆದೊಯ್ಯುವ ಮೂಲಕವೇ ಮಾಡಲಿದ್ದೇನೆ. ಅವರಿಲ್ಲದೆ ಎನೂ ಮಾಡುವುದಿಲ್ಲ. ಅವರು ಗೆಲ್ಲಿಸಿದರಷ್ಟೇ ನಾನು ಗೆಲ್ಲಲು ಅವಕಾಶ ಆಗುತ್ತದೆ. ಕ್ಲೀನ್ ಇಮೇಜ್ ಇರುವಂತಹ ವ್ಯಕ್ತಿ ಆಗಿದ್ದೇನೆ. 30 ವರ್ಷದಿಂದ ದುಡಿದಿದ್ದೇನೆ. ಇದೊಂದು ಕೊನೆ ಅವಕಾಶ ಕೊಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಎನೂ ಮಾಡಿಲ್ಲವೆಂದು ಬಿಜೆಪಿ ಆರೋಪಿಸಿದೆ. 1864ಕೋಟಿ ರೂ.ಗಳ ನರ್ಮ್ ಯೋಜನೆ ಕೊಟ್ಟಿದ್ದು ನಮ್ಮ ಸರ್ಕಾರವಾಗಿದೆ. ಮೈಸೂರು ನಗರಕ್ಕೆ ಬರುತ್ತಿರುವ 450 ಎಂಎಲ್‍ಡಿ ಕುಡಿಯುವ ನೀರು ಕಾಂಗ್ರೆಸ್‍ನ ಕೊಡುಗೆಯಾಗಿದೆ. ಇಂತಹ ಸಾಕಷ್ಟು ಯೋಜನೆಗಳಿದ್ದು, 2013 ರಿಂದ 18ರವರೆಗೆ ಮಾಡಿದ ಅಭಿವೃದ್ಧಿ ಮಾಡಿರುವ ಪಟ್ಟಿಯನ್ನು ಶೀಘ್ರ ಕೊಡುತ್ತೇನೆ. ಹೀಗಾಗಿ ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ ಎನ್ನುವುದನ್ನು ಯಾರು ಹೇಳುವಂತಿಲ್ಲವೆಂದರು.
ಇನ್ನೂ ಕೆಲವೇ ದಿನಗಳಲ್ಲಿ ಕೋಮು ಗಲಭೆ ಸೃಷ್ಠಿಸಿ ಜನರನ್ನು ಸೆಳೆಯುವ ಯತ್ನ ನಡೆದರೂ ನಡೆಯಬಹುದಾಗಿದ್ದು, ಜನಸಾಮಾನ್ಯರ ಕುತಂತ್ರಕ್ಕೆ ಯಾವ ಕಾರಣಕ್ಕೂ ಬಲಿ ಆಗಬೇಡಿ. ಕ್ಷೇತ್ರದಲ್ಲಿ ಮುಸ್ಲಿಂ ಅವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನಗೆ ಟಿಕೇಟ್ ಸಿಕ್ಕಿದ್ದು, ನಾವೆಲ್ಲರೂ ಒಗ್ಗೂಡಿ ಚುನಾವಣೆ ಎದುರಿಸಲಿದ್ದೇವೆಂದರು. ಗ್ಯಾರಂಟಿ ಶ್ರೀರಕ್ಷೆ: ಶಾಸಕ ತನ್ವೀರ್‍ಸೇಠ್ ಮಾತನಾಡಿ, ಬಡತನ ನಿರ್ಮೂಲನೆ, ಹಸಿವು ಮುಕ್ತ ಮಾಡುವುದು ನಮ್ಮ ಉದ್ದೇಶ. ಜಾತಿ, ಧರ್ಮ ಮಿಗಿಲಾಗಿ ಜನರು ಇಂದು ಬಡತನ ಕಷ್ಟದಲ್ಲಿರುವವರಿಗೆ ಸ್ಪಂದಿಸುವುದಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳು ಜಾತಿ, ಧರ್ಮ ಬೇಧ ಇಲ್ಲದೆ ಎಲ್ಲರನ್ನೂ ಮುಟ್ಟುವ ಕೆಲಸ ಮಾಡಿರುವುದು ನಮ್ಮ ಪಕ್ಷ ಹಾಗೂ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಕ್ಷೇತ್ರದಲ್ಲಿ ಕಾಫಿ, ತಂಬಾಕು ಬೆಳೆಗಾರರ ಸಮಸ್ಯೆ, ಅಂತಾರಾಷ್ಟ್ರೀಯ ನಿಲ್ದಾಣ ಮತ್ತು ಮೈಸೂರು- ಬೆಂಗಳೂರು ಹೆದ್ದಾರಿಯಾದ ಬಳಿಕ ಯುವ ಜನತೆಗೆ ಉದ್ಯೋಗ ಸೃಷ್ಠಿಸುವುದು ನಮ್ಮ ಆದ್ಯತೆ. ಈಗಾಗಲೇ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಾವು ಕೊಟ್ಟ ಕೊಡುಗೆಗಳೆಲ್ಲವೂ ನಮ್ಮ ಜತೆಗಿವೆ. ಚುನಾವಣಾ ಅಭ್ಯರ್ಥಿ ಜನರ ಸೇವಕನಾಗಿ ಜನರ ಪ್ರತಿನಿಧಿಯಾಗಿ ಕೆಲಸ ಮಾಡಬೇಕೆಂದು ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಡಲಾಗಿದೆ. ನಮ್ಮ ಅಭ್ಯರ್ಥಿ ಜನರ ಸೇವಕನಾಗಿ ಬರುತ್ತಾನೆಂದು ಭಾವಿಸಿದ್ದೇನೆಂದರು.
ಶಾಸಕ ಹರೀಶ್ ಗೌಡ ಮಾತನಾಡಿ, 8 ವಿಧಾನಸಭಾ ಕ್ಷೇತ್ರದಲ್ಲಿ ಐದು ಮಂದಿ ಶಾಸಕರಿದ್ದೇವೆ. 2ರಲ್ಲಿ ಜೆಡಿಎಸ್, 1ರಲ್ಲಿ ಬಿಜೆಪಿ ಇದೆ. ಬಿಜೆಪಿಯ ಅನಾಚಾರವನ್ನು ಜನರ ಮುಂದಿಡುವ ಕೆಲಸ ಮಾಡುತ್ತೇವೆ. ಮೈಸೂರು ಜಿಲ್ಲೆಗೆ ಮೈಸೂರಿನವರೇ ಸಿಎಂ ಆದ ಸಿದ್ದರಾಮಯ್ಯ ಅವರು ಕೊಡುಗೆ ಎನೂ ಎಂಬುದನ್ನು ತಿಳಿಸುತ್ತೇವೆ. ನಗರಕ್ಕೆ 900 ಕೋಟಿಗೂ ಹೆಚ್ಚಿನ ಅನುದಾನ ನೀಡ ಆರೋಗ್ಯ ಮತ್ತು ಶಿಕ್ಷಣ ಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹೇಳಿದರು.
ಐದು ಗ್ಯಾರಂಟಿಗಳ ಮೂಲಕ ನುಡಿದಂತೆ ನಡೆದ ನಾಯಕರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದೇವೆ. ಬಿಜೆಪಿಯವರು ಮೋದಿ ಹೆಸರು ಹೇಳಿ ಮತ ಕೇಳಿದರೆ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ತನ್ವೀರ್ ಅವರ ಹೆಸರು ಹೇಳಿ ಮತ ಕೇಳುತ್ತೇವೆ. ಒಕ್ಕಲಿಗರಿಗೆ ಹೆಚ್ಚು ಮನ್ನಣೆ ಕೊಡಲಿಲ್ಲ ಎಂದು ವಿರೋಧ ಪಕ್ಷದವರು ಹುಟ್ಟು ಹಾಕುತ್ತಿದ್ದಾರೆ. ಬಿಜೆಪಿಯಲ್ಲಿ ಸಮುದಾಯವನ್ನು ನಿಜಕ್ಕೂ ಕಡೆಗಣಿಸಿದ್ದಾರೆ. ಇದನ್ನು ಸಮುದಾಯದ ಜನರು ಅರ್ಥಮಾಡಿಕೊಳ್ಳಬೇಕೆಂದರು.
ಹುಣಸೂರು ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ನಾನು ಸೋತಿದ್ದರೂ ಸಹ 230ಕೋಟಿ ರೂ.ಗೂ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. 87ಕೋಟಿ ರೂ ಅನುದಾನದಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನುದಾನ ನೀಡಿದ್ದಾರೆ. ಎಲ್ಲಾ ವರ್ಗದವರಿಗೂ ಸಮಾನತೆ ಕಂಡಿದ್ದಾರೆ. ಬಿಜೆಪಿಯಲ್ಲಿ ಅದು ಇಲ್ಲವಾಗಿದೆ. 28ಕ್ಷೇತ್ರದಲ್ಲಿ ಎಲ್ಲಾ ಸಮುದಾಯಕ್ಕೂ ಅವಕಾಶ ನೀಡಿದ್ದಾರೆ. ಜೆಡಿಎಸ್ ತಕೋಳೋ ಮೂರು ಸೀಟಿಗೆ ಅಳಿಯ, ಮಗ ಮೊಮ್ಮಗನಿಗೆ ಹಂಚಿಕೊಂಡು ಸ್ವತಃ ನಶಿಸಿಹೋಗುತ್ತಿದ್ದಾರೆ. ಇಂತಹ ವಿಚಾರಗಳ ಮೇಲೆ ನಾವು ಹೋಗುತ್ತಿದ್ದೇವೆಂದರು.
ಚಾಮುಂಡಿ ಬೆಟ್ಟ ಹಾಗೂ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಮಾಡಿದ್ದಾರೆ. 700 ಕೆಜಿ ಹೆಚ್ಚು ಬೆಳ್ಳಿಯನ್ನು ಮಲೆಮಹದೇಶ್ವರನಿಗೆ ಕೊಟ್ಟಿದ್ದಾರೆ. ನಮಗೂ ರಾಮ, ಹನುಮ ಭಕ್ತನಿದ್ದಾರೆ. ರಾಮನ ಚಿಂತನೆ ಯಾವ ರೀತಿ ಎಂಬುದು ಯೋಚಿಸಬೇಕಿದೆ. ದೇವಾಲಯ ಹುಡುಕಿ, ಗರ್ಭ ಗುಡಿ ನಿರ್ಮಿಸಿ, ದೇವರನ್ನು ಪ್ರತಿಪಾದಿಸಿದ್ದು ನಾವು ಗಂಟೆ ಕೊಟ್ಟು ದೇವಸ್ಥಾನ ನನ್ನದು ಎಂಬಂತಾಗಿದೆ ಬಿಜೆಪಿಯ ಕಥೆ. ಬಿಜೆಪಿ ರಾಜವಂಶ್ಥರಲ್ಲ, ರಾಜವಂಶಸ್ಥರ ದತ್ತು ಪುತ್ರರಾಗಿದ್ದಾರೆಂದರು.
ಈ ಚುನಾವಣೆ ಕಾರ್ಯಕರ್ತರಿಗೂ ಸವಾಲಾದ ಚುನಾವಣೆ ಆಗಿದೆ. ಈ ಜವಾಬ್ದಾರಿಯನ್ನು ಕಾರ್ಯಕರ್ತರು ತೆಗೆದುಕೊಳ್ಳಬೇಕಿದೆ. ಪಕ್ಷ ಬಿಟ್ಟು ಹೋದವರನ್ನು, ಬಿಜೆಪಿಯಿಂದ ದೂರ ಉಳಿದವರನ್ನು ಪಕ್ಷಕ್ಕೆ ಕರೆತರುವ ಕೆಲಸ ಆಗಬೇಕಿದೆ ಎಂದು ಸಲಹೆ ನೀಡಿದರು.
ಎಂ.ಎಲ್.ಸಿ.ಡಾ.ತಿಮ್ಮಯ್ಯ ಮಾತನಾಡಿ, ಕಾಂಗ್ರೆಸ್ ಸರ್ವಜನಾಂಗದ ಪಕ್ಷವಾಗಿದೆ. ಆದರೆ, ಬಿಜೆಪಿ ಒಂದು ಧರ್ಮವನ್ನು ಮುಂದಿಟ್ಟುಕೊಂಡು ಒಂದು ಧರ್ಮವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಒಂದು ಧರ್ಮ, ಜಾತಿಗೆ ಕಾಂಗ್ರೆಸ್ ಯೋಜನೆಗಳನ್ನು ಕೊಟ್ಟಿಲ್ಲ. ಕಾಂಗ್ರೆಸ್ ಜಾತಿ, ಧರ್ಮ ನೋಡಿ ಯೋಜನೆ ಕೊಡುವುದಿಲ್ಲವೆಂದರು. ಚುನಾವಣಾ ಬಾಂಡ್ ಅನ್ನು ಎಷ್ಟರ ಮಟ್ಟಿಗೆ ದುರುಪಯೋಗ ಮಾಡಿಕೊಂಡಿದೆ ಎಂಬುದನ್ನು ನೋಡಬೇಕಿದೆ. ಕ್ರೇಜಿವಾಲ್ ಅವರನ್ನು ಸೆರೆ ಹಾಕಿರುವುದು ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.
ಸುಶಿಕ್ಷಿತ ಅಭ್ಯರ್ಥಿ ಆಗಿದ್ದಾರೆ. ಅಂತಹವರನ್ನು ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಸುಶ್ರೂತ್ ಗೌಡ, ಪ್ರದೀಪ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವೆಂಕಟೇಶ್, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.