ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸೆ.22ರಂದು ಬೆಳಗಾವಿಯಲ್ಲಿ ವಕೀಲರ ಸಮಾವೇಶ: ಬಸವಜಯ ಮೃತ್ಯುಂಜಯ ಶ್ರೀ
ವಿಜಯಪುರ,ಸೆ.18: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಮಾಜ ಮುಂದಾಗಿದೆ. ಈ ಹಿನ್ನೆಲೆ ಸೆ. 22ರಂದು ಬೆಳಗ್ಗೆ 10ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಮಹಾಪರಿಷತ್ ಸಭೆ ನಡೆಸಲಾಗುತ್ತಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಂಗಳವಾರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕಳೆದ ಮೂರೂವರೆ ವರ್ಷಗಳಿಂದ ನಡೆಸುತ್ತಿರುವ ಹೋರಾಟ ಇದೀಗ ಮತ್ತೊಂದು ಆಯಾಮದ ಮೂಲಕ ಸಾಗಲಿದೆ. ರಾಜ್ಯದಲ್ಲಿರುವ ಸಮಾಜದ ಎಲ್ಲ ವಕೀಲರನ್ನು ಸೇರಿಸಿ ಹೋರಾಟ ಮಾಡಲಾಗುತ್ತಿದೆ. ಎಲ್ಲಾ ವಕೀಲರು ನಮ್ಮ ಹಕ್ಕು ಕೇಳುವುದರಲ್ಲಿ ತಪ್ಪೇನಿದೆ ಎಂದು 22ರಂದು ಬೆಳಗ್ಗೆ 10ಗಂಟೆಗೆ ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸಭೆ ಸೇರಲಿದ್ದಾರೆ. ಸಭೆಯಲ್ಲಿ ಮುಂದೆ ಏನು ಮಾಡಬೇಕು ಎಂಬುದು ಚರ್ಚಿಸಲಾಗುವುದು ಎಂದರು.
ಈ ಬಾರಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ತಿನ ಮೂಲಕ ಕಾನೂನು ಹೋರಾಟ ನಡೆಸಲಾಗುವುದು. ಸರ್ಕಾರದಿಂದ ಇದಕ್ಕೂ ಸ್ಪಂದನೆ ಸಿಗದಿದ್ದರೆ ಮುಂಬರುವ ಡಿಸೆಂಬರ್ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಸೆ.22ರಂದು ಬೆಳಗಾವಿಯ ರಾಣಿ ಚೆನ್ನಮ್ಮನ ವೃತ್ತಕ್ಕೆ ಬಂದು ಧರಣಿ ಮಾಡಲಾಗುವುದು. ಹಾಗಾಗಿ ರಾಜ್ಯದಲ್ಲಿನ ಸಮಾಜದ ಎಲ್ಲ ವಕೀಲರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇನ್ನು ಸಮಾಜದ ಬಡ ವಿದ್ಯಾರ್ಥಿಗಳ ಹಾಗೂ ಉದ್ಯೋಗಕ್ಕಾಗಿ ಮನೆಮಠ ಬಿಟ್ಟು ಮುಖಂಡರು ಹಾಗೂ ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ನಾವು ಮಾಡಿದ ಹೋರಾಟದಿಂದ ಹಿಂದಿನ ಸರ್ಕಾರ 2ಡಿ ಮಾಡಿದ್ದರೂ ಅದು ಜಾರಿಯಾಗಲಿಲ್ಲ. ಅದಾದ ಬಳಿಕ ಬಂದ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಹ ಸಭೆ ಕರೆಯುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಇದುವರೆಗೂ ಸಭೆ ಕರೆಯಲಿಲ್ಲ. ಈ ಹಿನ್ನೆಲೆ ಮತ್ತೆ ನಾವು ರಾಷ್ಟ್ರೀಯ ಹೆದ್ದಾರಿ ತಡೆದು, ನಡು ರಸ್ತೆ ಮೇಲೆ ಇಷ್ಟಲಿಂಗ ಪೂಜೆಯ ಮೂಲಕ ಹೋರಾಟ ಮಾಡಲಾಯಿತು. ಆ ಸಮಯದಲ್ಲಿ ಡಿಸೆಂಬರ್ 12ರಂದು ನಮ್ಮನ್ನು ಕರೆದು ಶೀಘ್ರದಲ್ಲಿ ಸಭೆ ಕರೆಯುತ್ತೇನೆ ಎಂದು ಹೇಳಿದವರು ಸುಳ್ಳು ಹೇಳುತ್ತಲೇ ಇದ್ದಾರೆ. ಕೇವಲ ಒಂದು ವಾರದಲ್ಲಿ ಸಭೆ ಕರೆಯುತ್ತೇನೆ ಎಂದು ಹೇಳಿದ ಅವರು ಇದುವರೆಗೂ ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಲಕ್ಷ್ಮಿ ಹೆಬ್ಬಾಳ್ಕರï, ಸಿದ್ದು ಸವದಿ ಸೇರಿದಂತೆ ಸಮಾಜದ ಎಲ್ಲ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ನಾವು ಸಹ ಎಲ್ಲ ಪಕ್ಷಗಳಲ್ಲಿರುವ ಸಮಾಜದ ಶಾಸಕರು, ಮಂತ್ರಿಗಳ ಮನೆಗೆ ಹೋಗಿ ಮನವಿ ಮಾಡಿದ್ದೇವೆ. ಆದರೆ ಅಧಿವೇಶನದಲ್ಲಿ ಸ್ಪೀಕರ್ ಅವರು ನಮ್ಮ ಶಾಸಕರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಶಾಸಕರ ಹಕ್ಕು ಮೊಟಕುಗೊಳಿಸಲಾಗಿದೆ ಎಂದು ಸ್ಪೀಕರ್ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೆವು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹಾಗೂ ಪಂಚಮಸಾಲಿ ಮುಖಂಡ ಈರಣ್ಣ ಚಾಗಶೆಟ್ಟಿ ಮಾತನಾಡಿ, ಸೆ. 22ರಂದು ಬೆಳಗಾವಿಯಲ್ಲಿ ನಡೆಸುವ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಪರಿಷತ್‍ಗೆ ಜಿಲ್ಲೆಯ ಎಲ್ಲಾ ವಕೀಲರು ಭಾಗವಹಿಸಬೇಕು. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಜಿಲ್ಲೆಯಿಂದಲೂ 200ಕ್ಕೂ ಅಧಿಕ ವಕೀಲರು ಪಾಲ್ಗೊಳ್ಳಬೇಕು. ಈ ಮೂಲಕ ಸಮಾಜಕ್ಕೆ 2ಎ ಮೀಸಲಾತಿ ಸಿಗುವಂತೆ ಶ್ರಮ ವಹಿಸಬೇಕು ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಮ್. ಪಾಟೀಲ (ದೇವರಹಿಪ್ಪರಗಿ) ಮಾತನಾಡಿ, 2ಎ ಮೀಸಲಾತಿಗಾಗಿ ಕಳೆದ ಮೂರೂವರೆ ವರ್ಷಗಳಲ್ಲಿ 6 ವಿವಿಧ ಬಗೆಯಲ್ಲಿ ಹೋರಾಟಗಳನ್ನು ನಡೆಸಲಾಗಿದೆ. ಇದೀಗ ಸಮಾಜದ ವಕೀಲರ ಮೂಲಕ 7ನೇ ವಿಧದ ಹೋರಾಟಕ್ಕೆ ಸಜ್ಜಾಗಿದ್ದೇವೆ. ಈ ಹಿನ್ನೆಲೆ ಎಲ್ಲ ತಾಲೂಕುಗಳಲ್ಲಿ ಸಭೆ ನಡೆಸಲಾಗಿದೆ. ಸಮಾಜದ ಎಲ್ಲ ವಕೀಲರು ಬೃಹತ್ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದು ಕೊನೆಯ ಹೋರಾಟ ಮಾಡಿ, ಕಾನೂನು ರೀತಿಯಲ್ಲೇ ನ್ಯಾಯ ಪಡೆದುಕೊಳ್ಳಲಾಗುವುದು ಎಂದರು.
ಸಮಾಜದ ಮುಖಂಡ ಹಾಗೂ ನ್ಯಾಯವಾದಿ ಶ್ರೀಶೈಲ ಮುಳಜಿ ಮಾತನಾಡಿ, ಸೆ.22ರಂದು ವಕೀಲರ ಪರಿಷತ್ ಸಮಾವೇಶ ನಡೆಸಲಾಗುತ್ತಿದೆ. ನ್ಯಾಯಕ್ಕಾಗಿ ಈಗಾಗಲೇ ಪಾದಯಾತ್ರೆ, ಲಿಂಗಪೂಜೆ, ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ 6 ಹೋರಾಟಗಳು ಮುಗಿದಿವೆ. ಇದೀಗ ನಿವೃತ್ತ ನ್ಯಾಯಾಧೀಶರ ಸಲಹೆ ಪಡೆದು ಕಾನೂನು ಹೋರಾಟ ಶುರು ಮಾಡಲಾಗಿದೆ. ಜಿಲ್ಲೆಯಲ್ಲಿ ಆ.21 ರಂದು ವಕೀಲರ ಪೂರ್ವಭಾವಿ ಸಭೆ ನಡೆಸಿದ್ದೆವು. ಸಮಾಜದ ಎಲ್ಲ ವಕೀಲರು ಹೋರಾಟದಲ್ಲಿ ಭಾಗವಹಿಸಲಿದ್ದು, ಸೆ. 22ರಂದು ಜಿಲ್ಲೆಯಿಂದ 200ಕ್ಕೂ ಅಧಿಕ ವಕೀಲರು ತೆರಳಿ, ಹಕ್ಕೊತ್ತಾಯ ಮಂಡಿಸಿ ಒತ್ತಾಯಿಸಲಾಗುವುದು. ಸಿಎಂ ಸಿದ್ಧರಾಮಯ್ಯ ಅವರು ತಕ್ಷಣ ಶ್ರೀಗಳ ಹಾಗೂ ವಕೀಲರ ಸಭೆ ಕರೆದು ಮಾತನಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಿ.ಎಂ. ಪೆÇಲೀಸಪಾಟೀಲ, ನಿಂಗನಗೌಡ ಸೋಲಾಪುರ, ಶ್ರೀಶೈಲ ಬುಕ್ಕಣ್ಣಿ, ದಾನೇಶ ಅವಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.