ಸಂಸದ ಮುಂದೆ ಬಿಜೆಪಿ ಮುಖಂಡನ ಅಸಮಾಧಾನ
ಸಂಜೆವಾಣಿ ವಾರ್ತೆ.
ಚಿತ್ತಾಪುರ:ಮಾ.24: ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲವೆಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಅವರು ಸಂಸದ ಉಮೇಶ್ ಜಾಧವ್ ಅವರ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಸಂಸದ ಉಮೇಶ ಜಾಧವ್ ಅವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಮಾತನಾಡಿ ಬಿಜೆಪಿಯಲ್ಲಿ ಶಿಷ್ಟಾಚಾರದ ಪ್ರಕಾರ ಹಿರಿಯ ಮುಖಂಡರಿಗೆ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ. ಅಲ್ಲದೆ ಕಾರ್ಯಕರ್ತರಿಗೂ ಯಾವುದೇ ಬೆಲೆ ಇಲ್ಲದಂತಾಗಿದೆ. ಕಾರ್ಯಕರ್ತರು ಮತ್ತು ಮುಖಂಡರನ್ನು ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ನೋಡುತ್ತಿದ್ದಾರೆ. ಚುನಾವಣೆಗೆಂದೇ ಬಂದ ಕೆಲ ಮುಖಂಡರಿಗೆ ಸ್ಥಾನ ಮಾನ ನೀಡುತ್ತಿರುವುದು ಸರಿಯಲ್ಲ. ಆ ಮುಖಂಡರಿಂದಲೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಅಷ್ಟರಲ್ಲೇ ಸಭೆಯಿಂದ ಎದು ಬಂದಾ ಶರಣಗೌಡ ಭೀಮನಳ್ಳಿ ಅಯ್ಯಪ್ಪ ರಾಮತೀರ್ಥ ಅವರಿಗೆ ಏರು ಧ್ವನಿಯಲ್ಲಿ ಸಮಾಧಾನ ಹೇಳಲು ಪ್ರಯತ್ನಿಸಿದಾಗ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದು ತಳ್ಳಾಟ ನೂಕಾಟ ನಡೆಯಿತು. ಇಷ್ಟಾದರೂ ಸಂಸದ ಡಾ. ಉಮೇಶ ಜಾಧವ ಮಾತ್ರ ಅವರ ಜಟಾಪಟಿ ವೀಕ್ಷಿಸುತ್ತಾ ನಿಂತಿದ್ದರು.
ಹಿರಿಯ ಬಿಜೆಪಿ ಕಾರ್ಯಕರ್ತರು ಅಯ್ಯಪ್ಪ ರಾಮತೀರ್ಥ, ಹಾಗೂ ಶರಣಗೌಡ ಅವರಿಗೆ ಸಮಾಧಾನ ಮಾಡಿದ ಘಟನೆ ನಡೆಯಿತ್ತು.