ಹೈಕಮಾಂಡ್ ನಿಂದ ಸಿಗದ ಟಿಕೇಟ್; ಜಿ.ಬಿ ವಿನಯ್ ಕುಮಾರ್ ಬೇಸರ
ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ.23; ಜನರ ಕನಸನ್ನು ಸಾಕಾರಗೊಳಿಸಲು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದ್ದೆ. ಆದರೆ, ದೆಹಲಿಯಲ್ಲಿ ಕೇವಲ ಅರ್ಧ ಗಂಟೆಯಲ್ಲೇ ನನ್ನ ಹೆಸರು ಕ್ಯಾನ್ಸಲ್ ಆಗಿದ್ದು, ಮೌಂಟ್ ಎವರೆಸ್ಟನ್ನೇರಿ, ಇನ್ನೇನು ಬಾವುಟ ಸಿಗಿಸಬೇಕೆನ್ನುವಷ್ಟರಲ್ಲಿ ಜಾಡಿಸಿ ಒದ್ದಂಗೆ ನನ್ನ ಹೆಸರು ಕೈಬಿಟ್ಟರು ಎಂದು ಬೆಂಗಳೂರಿನ ಇನ್‌ಸೈಟ್ಸ್‌ ಅಕಾಡೆಮಿ ಸಂಸ್ಥಾಪಕ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಬೇಸರ ಹೊರ ಹಾಕಿದ್ದಾರೆ. ನಗರದಲ್ಲಿ ತಮ್ಮ ನಿವಾಸದಲ್ಲಿ ತಮ್ಮ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಲು ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಪ್ಪ ಮಿನಿಸ್ಟರ್ ಅಲ್ಲ, ನಮ್ಮ ತಾತ ರಾಜಕಾರಣಿಯಲ್ಲ. ಎಂಪಿ, ಎಂಎಲ್‌ಎ ಯಾರೂ ಅಲ್ಲ, ದಾವಣಗೆರೆಯಲ್ಲಿ 30 ವರ್ಷಗಳಿಂದ ಟಿಕೆಟ್ ಸಿಕ್ಕಿಲ್ಲವೆಂದು, ಜನರ ಕನಸನ್ನು ಕಾರ್ಯ ರೂಪಕ್ಕೆ ತರಲು, ಮಾದರಿ ಕ್ಷೇತ್ರ ಮಾಡುವ ಕನಸಿನೊಂದಿಗೆ ಟಿಕೆಟ್‌ಗಾಗಿ ಪ್ರಾಮಾಣಿಕವಾಗಿ, ಶಕ್ತಿ ಮೀರಿ ಪ್ರಯತ್ನ ಮಾಡಿದ್ದೆ ಎಂದರು.ನಮ್ಮೆಲ್ಲಾ ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು, ವಿವಿಧ ಸಮುದಾಯಗಳ ಮುಖಂಡರ ಸಲಹೆಯಂತೆ 20 ದಿನಗಳ ಕಾಲ ಇಡೀ ಕ್ಷೇತ್ರಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಹಳ್ಳಿಗಳನ್ನು ಸುತ್ತಾಡಿ, ಜನರ ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿದ್ದೇವೆ. ಸಾಮಾನ್ಯ ಜನರಿಂದ ಉಪ ಮುಖ್ಯಮಂತ್ರಿವರೆಗೆ ನಿನಗೆ ಟಿಕೆಟ್ ಸಿಕ್ಕಿದ್ದರೆ, ನೀನು ಗೆದ್ದುಬರುತ್ತಿದ್ದೆಯೆಂಬುದಾಗಿ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದಂತಾಗಿದೆ ಎಂದು ಅವರು ಬೇಸರ ತೋಡಿಕೊಂಡರು. ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಸರ್ವೇಗಳಲ್ಲೂ ನನ್ನ ಬಗ್ಗೆ ಎಲ್ಲರಿಂದಲೂ ಪೂರಕ, ಸಕಾರಾತ್ಮಕವಾಗಿ ಪ್ರತಿಕ್ರಿಯೆ, ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಎಲ್ಲಾ ಸರ್ವೇಗಳನ್ನು ಸುಳ್ಳು ಎಂಬಂತೆ ಮಾಡಲಾಗಿದೆ. ಇಡೀ ಕ್ಷೇತ್ರದಲ್ಲಿ ಜನ ಸಾಮಾನ್ಯರು ನನಗೆ ಮತ ನೀಡಲು ಕಾಯುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಟ 25 ಸಾವಿರ ಮತಗಳನ್ನು ಪಡೆಯುಲ ಸಾಮರ್ಥ್ಯ ನನಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಘೋಷಿಸುವ ಪದ್ಧತಿ, ರೀತಿಯೇ ಸರಿ ಇಲ್ಲ. ದಾವಣಗೆರೆಯಲ್ಲಿ ಸಾಮಾಜಿಕ ನ್ಯಾಯ ಸತ್ತು ಹೋಗಿದೆ. ಸಾಮಾಜಿಕ ನ್ಯಾಯಕ್ಕೆ ಮರುಜೀವ ಕೊಡಲು ಮುಂದಾಗಿದ್ದೆ ಎಂದು ಅವರು ಹೇಳಿದರು. ಸ್ವತಃ ಬಿಜೆಪಿಯ ನಾಯಕರೇ ನನ್ನ ಬಗ್ಗೆ ಗುಡ್ ಪರ್ಸನ್‌ ಇನ್‌ ರಾಂಗ್ ಪಾರ್ಟಿ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಕೇಳಿದ್ದರೆ ಖಂಡಿತವಾಗಿಯೂ ಟಿಕೆಟ್ ಸಿಗುತ್ತಿತ್ತು. ಪಕ್ಷೇತರನಾಗಿ ನಿಲ್ಲುವ ಬಗ್ಗೆಯೂ ನನಗೆ ಒತ್ತಡ ಇದೆ. ಪಕ್ಷೇತರನಾಗಿ ಸ್ಪರ್ಧೆ ಮಾಡಿದರೂ ನಾನು ಬಲಾಢ್ಯ ಪಕ್ಷಗಳ ವಿರುದ್ಧ ಸ್ಪರ್ಧಿಸಿ, ಗೆಲ್ಲಬೇಕು. ಮತ್ತೊಬ್ಬರನ್ನು ಸೋಲಿಸುವುದಕ್ಕೆಂದು ನಾನು ಸ್ಪರ್ಧಿಸುವುದಿಲ್ಲ. ನಾನು ಗೆಲ್ಲಬೇಕೆಂದುಕೊಂಡೇ ಸ್ಪರ್ಧಿಸುವವನು. ಸುಮ್ಮನೇ ಯಾರನ್ನೋ ಸೋಲಿಸುತ್ತೇನೆಂದು ಸ್ಪರ್ಧಿಸುವುದಿಲ್ಲ. ನಾನು ಗೆಲ್ಲಬೇಕೆಂಬುದಷ್ಟೇ ನನ್ನ ಗುರಿಯಾರಿಗುತ್ತದೆ ಎಂದು ಅವರು ತಿಳಿಸಿದರು. ನನ್ನ ಆತ್ಮಸಾಕ್ಷಿಯು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಮುಂದಾಗುತ್ತಿಲ್ಲ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಲು ತುಂಬಾ ಅವಕಾಶ ಇದ್ದರೂ ನನಗೆ ಟಿಕೆಟ್ ಕೊಟ್ಟಿಲ್ಲ. ಜನ ಸಾಮಾನ್ಯರು ನನ್ನ ಜೊತೆಗಿದ್ದಾರೆಂಬುದಂತೂ ನನಗೆ ಮನವರಿಕೆಯಾಗಬೇಕಿದೆ. ಜನ ಸಾಮಾನ್ಯರಾಗಿದ್ದರೆ ರಾಜಕಾರಣಕ್ಕೆ ಬರಬಾರದೆಂಬ ಉದ್ದೇಶವು ಪಕ್ಷದವರಿಗೆ ಇದ್ದಂತಿರುವುದು ಸಾಬೀತಾಗಿದೆ. ಇನ್ನು 20 ದಿನ ನಾನು ಜಿಲ್ಲಾದ್ಯಂತ ಪ್ರವಾಸ ಮಾಡಲಿದ್ದೇನೆ. ಪ್ರತಿ ಹಳ್ಳಿಯಲ್ಲೂ ಜನಾಭಿಪ್ರಾಯ ಸಂಗ್ರಹಿಸಿ, ನನ್ನ ಮುಂದಿನ ತೀರ್ಮಾನ ಕೈಗೊಳ್ಳುವೆ ಎಂದು ಅವರು ಸ್ಪಷ್ಟಪಡಿಸಿದರು.