ಸೋಮು ಸೌಂಡ್ ಇಂಜಿನಿಯರ್’  ಸಿನೆಮಾಕ್ಕೆ ಉತ್ತಮ ಸ್ಪಂದನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.23:  ಆರ್ಥ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಸೋಮು ಸೌಂಡ್ ಇಂಜಿನಿಯರ್’  ಸಿನೆಮಾ ಮಾ. 15 ಶುಕ್ರವಾರದಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು  ನಿರ್ಮಾಪಕ ಕ್ರಿಸ್ಟೋಫರ್ ಕಿಣಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಉತ್ತರ ಕರ್ನಾಟಕ ಗ್ರಾಮೀಣ ಸೊಗಡನ್ನು ಹೊಂದಿದ್ದು, ಸಂಬಂಧಗಳ ಕುರಿತು ತಿಳಿಸಿಕೊಡುತ್ತದೆ. ಕಥೆ ಈ ನಿಟ್ಟಿನಲ್ಲಿ ನಾಯಕ ಸೋಮು ಸುತ್ತ ಮುತ್ತಲಿದೆ ಎಂದು ಹೇಳಿದರು.ಚಿತ್ರವನ್ನು ಉತ್ತರ ಕರ್ನಾಟಕದ ಬಾಗಲಕೋಟೆಯ ಗಂಜಿಹಾಳ  ಗ್ರಾಮದಲ್ಲಿ ಚಿತ್ರಿಕರಿಸಲಾಗಿರುತ್ತದೆ. ಚಿತ್ರದ ನಾಯಕರಾಗಿ ಶ್ರೇಷ್ಠ, ನಾಯಕಿ ನಿವಿಷ್ಕಾ ಪಾಟೀಲ್, ಹಿರಿಯ ಕಲಾವಿದರಾದ ಗಿರೀಶ್ ಜತ್ತಿ, ಜಹಾಂಗೀರ್ ಇನ್ನಿತರರು ನಟಿಸಿರುತ್ತಾರೆ. ಅಭಿ ರವರ ನಿರ್ದೇಶನ, ಶಿವಸೇನ ಛಾಯಾಗ್ರಹಣ, ಚರಣ್ ರಾಜ್ ರವರ ಸಂಗೀತ, ದೀಪು ಎಸ್. ಕುಮಾರ್ ರವರ ಸಂಕಲನವಿದ್ದು ಮಾನವೀಯ ಮೌಲ್ಯಗಳನ್ನು ಸಾರುವ ಚಿತ್ರ ಇದಾಗಿದೆ ಎಂದರು.ಕಲಾವಿದ ಗಿರೀಶ್ ಜತ್ತಿ ಮಾತನಾಡಿ, ಚಿತ್ರವು ಹೊಸಬರ ತಂಡವನ್ನು ಒಳಗೊಂಡಿದ್ದು, ಚಿತ್ರದ ತಂಡದಿಂದ ಪ್ರಚಾರ ಆರಂಭವಾಗಿದೆ. ಮೊದಲಿಗೆ ಮಧ್ಯ ಕರ್ನಾಟಕದ ದಾವಣಗೆರೆಯಿಂದಲೇ ಆರಂಭಿಸಲಾಗಿದೆ. ದಾವಣಗೆರೆಯವನಾದ ನಾನು ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರ ಮಾಡಿದ್ದೇನೆ. ಎಲ್ಲರೂ ಚಿತ್ರ ಮಂದಿರಕ್ಕೆ ಆಗಮಿಸಿ, ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಕೋರಿದರು. ಕಲಾವಿದರಾದ ಡಿ. ಮಾಧವ್ ಮಾತನಾಡಿ, ಚಿತ್ರ, ಸಂಬಂಧಗಳ ಮಹತ್ವವನ್ನು ಸಾರಲಿದ್ದು, ನಾನು ನಾಯಕನ ಗೆಳೆಯನಾಗಿ ಅಭಿನಯಿಸಿದ್ದೇನೆ ಎಂದರು.ಸುದ್ದಿಗೋಷ್ಠಿಯಲ್ಲಿ, ಚಿತ್ರದ ನಾಯಕ ನಟ ಶ್ರೇಷ್ಠ, ನಾಯಕಿ ನಿವಿಷ್ಕಾ ಪಾಟೀಲ್, ಗಿರೀಶ್  ಇನ್ನಿತರರು ಉಪಸ್ಥಿತರಿದ್ದರು.