ದೇಶದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ;ಗಾಯತ್ರಿ ಸಿದ್ದೇಶ್ವರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦ : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ನಾವೆಲ್ಲ ಶ್ರಮಿಸಬೇಕು. ಈ ದೇಶದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಡಾ ಗ್ರಾಮದ ಮರುಳಸಿದ್ದೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪ್ರಮುಖ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನೀವು ನಾಲ್ಕು ಬಾರಿ ಜಿ.ಎಂ.ಸಿದ್ದೇಶ್ವರ್ ಅವರನ್ನು ಗೆಲ್ಲಿಸಿದ್ದೀರಿ. ಈ ಬಾರಿ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿದ್ದು, ಅವುಗಳನ್ನು ಮುಂದಿಟ್ಟುಕೊಂಡು ನಾವು ಮತಯಾಚನೆ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು  ಕರೆ ನೀಡಿದರು.ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದಾವಣಗೆರೆ ಅಭಿವೃದ್ಧಿಯ ಜೊತೆಗೆ ಬಾಡಾ ಗ್ರಾಮಕ್ಕೂ ಸಾಕಷ್ಟು  ಅನುದಾನ  ಹಾಕಿದ್ದೇನೆ. ನಮ್ಮ ಕುಟುಂಬಕ್ಕೆ ಮಾಯಕೊಂಡ ಕ್ಷೇತ್ರದ ಜನ 7 ಬಾರಿ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಿದ್ದೀರಿ. ಯುಗಾದಿ ಹಬ್ಬ ಮುಗಿದ ಮೇಲೆ ಚುನಾವಣಾ  ಕಾವು ಆರಂಭವಾಗಲಿದೆ ಎಂದರು.ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದಮೇಲೆ ದೇಶ ಸಾಕಷ್ಟು ಮುಂದುವರಿದಿದೆ. ನಾವು ಕಾಂಗ್ರೆಸ್  ಕೈಗೆ ಮತ್ತೆ ಅಧಿಕಾರ  ಕೊಟ್ಟರೆ ಟಿಪ್ಪು ಸುಲ್ತಾನ್, ಔರಂಗಜೇನ್ ಯಾವ ರೀತಿಯ ದುರಾಡಳಿತ ನೀಡಿದ್ರೋ ಅದೇ ರೀತಿ ದುರಾಡಳಿತ ನೀಡುತ್ತಾರೆ. ನಮ್ಮ ದೇಶಕ್ಕೆ ಪುನಃ  ಅಂತಹ ದುರಾಡಳಿತ ಬರಬಾರದು ಎಂದರೆ  ನಾವೆಲ್ಲ ಗಾಯತ್ರಿ ಸಿದ್ದೇಶ್ವರ್  ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ತಿಳಿಸಿದರು.ಲೋಕಸಭಾ  ಚುನಾವಣಾ ಸಂಚಾಲಕ ಹನಗವಾಡಿ ವಿರೇಶ್ ಮಾತನಾಡಿ, ಸೂರ್ಯ,  ಚಂದ್ರ ಇರೋದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿಲ್ಲದ ಸರದಾರ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಲು ಎಲ್ಲರೂ ಕೈಜೋಡಿಸಬೇಕು ಎಂದು  ಮನವಿ ಮಾಡಿದರು. ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನರೇಂದ್ರ ಮೋದಿಜಿ ಅವರ ನಾಯಕತ್ವ ನಮಗೆ ಬೇಕಾಗಿದೆ. ನಮ್ಮ ದೇಶದ ಅಭಿವೃದ್ಧಿ, ಸಂಸ್ಕೃತಿ  ಉಳಿಯಬೇಕೆಂದರೆ ದೇಶಕ್ಕೆ ಮೋದಿ ನೇತೃತ್ವದ ಆಡಳಿತ ಬೇಕು ಎಂದರು.