ಏ. 11ರಂದು ರಾಜ್ಯ ಮಟ್ಟದ ಛಲವಾದಿ ಬುದ್ಧಿಸ್ಟ್ ವಧು-ವರರ ಸಮಾವೇಶ
ಕಲಬುರಗಿ:ಮಾ.23:ನಗರದ ರಾಜಾಪೂರದ ಬುದ್ಧ ವಿಹಾರದಲ್ಲಿ ಏಪ್ರಿಲ್ 11ರಂದು ಗುರುವಾರ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ರಾಜ್ಯ ಮಟ್ಟದ ಪರಿಶಿಷ್ಟ ಜಾತಿಯ (ಛಲವಾದಿ ಬುದ್ಧಿಸ್ಟ್) ವಧು- ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಬುದ್ಧಿಸ್ಟ್ ವಧು- ವರರ ಸೇವಾ ಸಂಘದ ಸಲಹೆಗಾರ ಕೆ. ಪ್ರಕಾಶ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಸಂವಿಧಾನದ ನಿರ್ಮಾಪಕರು ಶೋಷಿತ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ರಾಜಕೀಯ, ಉದ್ಯೋಗ, ಆರ್ಥಿಕ ವಲಯಗಳಲ್ಲಿ ಮೀಸಲಾತಿ ನೀಡಿರುವ ಪ್ರಯುಕ್ತ ಪರಿಶಿಷ್ಟ ಜಾತಿ ಸಮುದಾಯದ ಬಡ ಮಕ್ಕಳು ಉನ್ನತ ಮಟ್ಟದ ಪದವಿಗಳನ್ನು ಮುಗಿಸಿಕೊಂಡು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾದರೂ ಸಹ ಅವರ ಶೈಕ್ಷಣಿಕ ಯೋಗ್ಯತೆಗೆ ಅನುಗುಣವಾಗಿ ವಧುಗಳಿಗೆ ವರ, ವರಗಳಿಗೆ ವಧು ಸಿಗದೇ ಇರುವುದರಿಂದ ಅವರ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಆಧುನಿಕ ಯುಗಲದಲ್ಲಿ ಸಮಾಜ ಬಾಂಧವ ಸಂಪರ್ಕ ಪರದೇ ಇರುವುದರಿಂದ ವಧು ಮತ್ತು ವರರ ಅನ್ವೇಷಣೆ ಮಾಡಲು ಅನಾನುಕೂಲವಾಗುತ್ತಿರುವುದನ್ನು ಮನಗಂಡು ಇಂತಹ ವಧು- ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಂಘವು ಈಗಾಗಲೇ ಅಧಿಕೃತ ನೊಂದಣಿ ಹೊಂದಿದೆ. ಇಲ್ಲಿಯವರೆಗೆ 337 ವಧುಗಳು, 245 ವರಗಳು ನೊಂದಣಿ ಮಾಡಿಸಿಕೊಂಡಿದ್ದು, ಒಟ್ಟು 382 ವಧು- ವರರ ನೊಂದಣಿಯಾಗಿದೆ. ಅವರಲ್ಲಿ 68 ವರಗಳು, 72 ವಧುಗಳ ಮದುವೆ ಆಗಿದೆ ಎಂದು ಅವರು ವಿವರಿಸಿದರು.
ಆದ್ದರಿಂದ ಪರಿಶಿಷ್ಟ ಜಾತಿಯ (ಛಲವಾದಿ ಬುದ್ಧಿಸ್ಟ್) ಸಮುದಾಯದ ಮದುವೆಯ ವಯಸ್ಸಿನ ಮಕ್ಕಳು ಹಾಗೂ ಅವರ ಪಾಲಕರು ತಮ್ಮ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಅವರ ಇತ್ತೀಚಿನ ದ್ವಿ ಪ್ರತಿಗಳ ಭಾವಚಿತ್ರಗಳೊಂದಿಗೆ ಮಕ್ಕಳೊಂದಿಗೆ ವಧು- ವರರ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9900678850, 9448604851ಗೆ ಸಂಪರ್ಕಿಸಲು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಶಿವಲಿಂಗಪ್ಪ ಕಲಕೇರಿ, ಕಾಳಪ್ಪ ಕೆಂಭಾವಿ, ಬಿ.ಎಲ್. ಬಿಜಾಸಪೂರಕರ್, ಶಿವಶಂಕರ್ ಪಟ್ಟಣಕರ್, ಚಂದ್ರಾಮ್ ಹುಬಳಿ, ಮರಲಿಂಗಪ್ಪ ಗುಳಬಾಳ್ ಮುಂತಾದವರು ಉಪಸ್ಥಿತರಿದ್ದರು.