ಅನಾಥ ವೃದ್ಧೆಗೆ ಪುನರ್ವಸತಿ
ಕಲಬುರಗಿ:ಮಾ.23: ವ್ಯಕ್ತಿಯೊಬ್ಬರು ಕೊಟ್ಟ ಮಾಹಿತಿಯ ಮೇರೆಗೆ ನಗರದ ಶೆಟ್ಟಿ ಕಾಂಪ್ಲೆಕ್ಸ್ ಎದುರು ಇರುವ ಅನಾಥ ವೃದ್ಧೆಗೆ ನಮ್ಮ ವೃದ್ಧಾಶ್ರಮದಲ್ಲಿ ಪುನರ್ವಸತಿ ಕಲ್ಪಿಸುವ ಮೂಲಕ ಅವಳಿಗೆ ಹೊಸ ಬದುಕು ಕೊಡಲಾಗಿದೆ ಎಂದು ಭಾಗ್ಯಜ್ಯೋತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಗಂಗಮ್ಮ ರೇವಣಸಿದ್ದಪ್ಪ ಗುರೇಗೋಳ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಕಡೆ ಚೌಕ್ ಬೇಲೂರ್ ರಸ್ತೆಯಲ್ಲಿನ ಟೆಂಗಳಿ ಸ್ವಿಮ್ಮಿಂಗ್ ಫೂಲ್ ಹತ್ತಿರದಲ್ಲಿ ಟ್ರಸ್ಟ್ ವತಿಯಿಂದ ಕಳೆದ 29 ತಿಂಗಳಿನಿಂದ ವೃದ್ಧಾಶ್ರಮ ಆರಂಭಿಸಲಾಗಿದೆ. ಈಗಾಗಲೇ 16 ಜನಕ್ಕೆ ಆಶ್ರಯ ಕೊಡಲಾಗಿದ್ದು, ಅವರಿಗೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಊಟ, ವಸತಿ, ಬಟ್ಟೆ ನೀಡಲಾಗುತ್ತಿದೆ ಎಂದರು.
ಕಳೆದ 18ರಂದು ಶ್ರೀಕಾಂತ್ ರೆಡ್ಡಿ ಅವರು ವೃದ್ಧಾಶ್ರಮಕ್ಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ನಾವು ಶೆಟ್ಟಿ ಕಾಂಪ್ಲೆಕ್ಸ್ ಎದುರು ಹೋಗಿ ಆಕೆಯನ್ನು ವೃದ್ಧಾಶ್ರಮಕ್ಕೆ ಕರೆದೊಯ್ದೆವು. ಈ ಸಂದರ್ಭದಲ್ಲಿ ಆಕೆಯ ಬಟ್ಟೆಯನ್ನು ಸರಿಪಡಿಸುವಾಗ ಆಕೆಯ ಹತ್ತಿರ ಇದ್ದ 3770ರೂ.ಗಳು ರಸ್ತೆಯ ಮೇಲೆ ಬಿದ್ದವು. ಆಕೆಯ ಗಮನಕ್ಕೆ ತಂದಿದ್ದಲ್ಲದೇ ಆಕೆಯು ಬಹಳಷ್ಟು ದಿನಗಳಿಂದ ಸ್ನಾನ ಸಹ ಮಾಡಿರಲಿಲ್ಲ. ಕೂದಲೂ ಸಹ ಕಗ್ಗಂಟಾಗಿದ್ದವು. (ಗಂಗಮ್ಮ ರೇವಣಸಿದ್ದಪ್ಪ) ನಂತರ ಆಕೆಯ ಕೂದಲನ್ನು ಕತ್ತರಿಸಿ ಸ್ನಾನ ಮಾಡಿಸಿ ಶುಭ್ರವಾದ ಬಟ್ಟೆಯನ್ನು ತೊಡಿಸಲಾಯಿತು. ಈಗ ಆಕೆ ಉತ್ತಮ ಬದುಕು ಸಾಗಿಸುತ್ತಿದ್ದಾಳೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಜಿಲ್ಲೆಯ ಸುತ್ತಮುತ್ತಲೂ ಇರುವ ವೃದ್ಧರು, ವೃದ್ಧೆಯರು ಹಾಗೂ ಮಾನಸಿಕ ಅಸ್ವಸ್ಥರಿಗೆ ಉತ್ತಮ ಬದುಕು ರೂಪಿಸುವ ಉದ್ದೇಶ ನಮ್ಮದಾಗಿದೆ. ಆದ್ದರಿಂದ ಸಾರ್ವಜನಿಕರು ಆ ಕುರಿತು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಅವರು ಕೋರಿದರು. ಪುನರ್ವಸತಿ ಪಡೆದ ಗಂಗಮ್ಮ ರೇವಣಸಿದ್ದಪ್ಪ ಅವರೂ ಸಹ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.