ಧೀರ ಹುತಾತ್ಮ ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಅವರ ಹುತಾತ್ಮ ದಿನಾಚರಣೆ
ಕಲಬುರಗಿ:ಮಾ.23:ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ಸುಖ್ ದೇವ್ ಹಾಗೂ ರಾಜ್ ಗುರು ಅವರ ಹುತಾತ್ಮ ದಿನವನ್ನು ಎಐಡಿಎಸ್ ಓ ನೇತೃತ್ವದಲ್ಲಿ ಇಂದು ಜಿಲ್ಲೆಯಾದ್ಯಂತ ಉದ್ಯಾನವನ, ಬಡಾವಣೆಗಳಲ್ಲಿ , ವಸತಿ ನಿಲಯ, ಕಾಲೇಜು ಗಳಲ್ಲಿ ಆಚರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಪದವಿ ಮಾಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಚರ್ಚಾಗೋಷ್ಠಿ ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರಾದ ಅಭಯಾ ದೀವಾಕರ ಮಾತನಾಡಿದರು. ಭಗತ್ ಸಿಂಗ್ ಅವರು ಹೀಗೆ ಹೇಳಿದ್ದರು “ಯಾವ ಕ್ರಾಂತಿ ಜನತೆಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ವಿದ್ಯಾರ್ಥಿಗಳು ಹಾಗೂ ಯುವ ಜನರು ದೇಶದ ಮೂಲೆ ಮೂಲೆಗೂ ಒಯ್ಯಬೇಕು. ಕೋಟ್ಯಾಂತರ ಮರ್ದಿತ ಜನರಿಗೆ ತಲುಪಿಸಬೇಕು. ಬಂಡವಾಳಶಾಹಿ ಮತ್ತು ಸಾಮ್ರಾಜ್ಯವಾದ ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ” ಎಂದು.
ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಹಸಿವು, ಬಡತನ, ನಿರುದ್ಯೋಗವಿಲ್ಲದಂತಹ ಸಮಾಜವಾದಿ ಭಾರತವನ್ನು ನಿರ್ಮಿಸುವುದೇ ಅವರ ಕನಸಾಗಿತ್ತು. ಅವರ ಕನಸನ್ನು ನನಸಾಗಿಸುವ ದಾರಿಯಲ್ಲಿ ಅವರ ಉತ್ತರಾಧಿಕಾರಿಗಳಾಗಿ ವಿದ್ಯಾರ್ಥಿಗಳು, ಯುವಜನರ ಮುನ್ನಡೆಯುವುದು ತುರ್ತು ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಕುಂಬಾರ ಹಾಗೂ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ, ವೇದಿಕೆ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಎಸ್ ಎಸ್ ವಾಣಿ ವಹಿಸಿದ್ದರು.