ತಿಳಗೂಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಗ್ರಾಪಂ.ಗೆ ಬೀಗ ಜಡಿದು ತಲೆಯ ಮೇಲೆ ಕಲ್ಲು ಹೊತ್ತು ಉಪವಾಸ, ಧರಣಿ ಸತ್ಯಾಗ್ರಹ
ವಿಜಯಪುರ,ಮಾ.23:ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮದಲ್ಲಿ ತಿಂಗಳು ಕಳೆದರೂ ಯಾವುದೇ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಗ್ರಾಮದ ಎರೆ ಹೊಲದಲ್ಲಿ ಸರ್ಕಾರದಿಂದ ಎರಡು ಬಾವಿಗಳನ್ನು ನಿರ್ಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಎರಡು ಬಾವಿಗಳಲ್ಲಿ ನೀರು ತುಂಬಿದ್ದರೂ ಎರಡೂ ಬಾವಿಗಳ ಪೈಪ್ಲೈನ್ ಒಡೆದು ಹೋಗಿ ಸುಮಾರು 4 ರಿಂದ 5 ವರ್ಷಗಳು ಗತಿಸಿದರೂ ಯಾವೊಬ್ಬ ಅಧಿಕಾರಿಯೂ ಸಹ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿಗೆ ಬೀಗ ಮುದ್ರೆ ಹಾಕಿ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಬೇಡಿಕೆ ಈಡೇರಿಸುವ ವರೆಗೆ ಉಪವಾಸ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ,
ಕೂಡಲೇ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ಎರೆ ಹೊಲದಲ್ಲಿ ಇರುವ ಎರಡು ಬಾವಿಗಳ ಪೈಪ್ಲೈನ್ ಮಾಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಬೇಕು, 15ನೇ ಹಣಕಾಸು ಯೋಜನೆ ಸಂಪೂರ್ಣ ತನಿಖೆ ಆಗಬೇಕು. ಕೊಳ್ಳೆ ಹೊಡೆದ ಹಣವನ್ನು ಸರ್ಕಾರಕ್ಕೆ ಮರಳಿ ತುಂಬಿಸಬೇಕು, ಎಸ್ಸಿ ಎಸ್ಟಿ ವಾರ್ಡ್ ಗಳಲ್ಲಿ ಸಿಸಿ ರಸ್ತೆಗಳು ನಿರ್ಮಾಣ ಮಾಡಬೇಕು, ಪಂಚಾಯಿತಿಯಲ್ಲಿ ಇರುವ ಕಸದ ವಾಹನವನ್ನು ಪ್ರತಿ ಹಳ್ಳಿಗಳಿಗೆ ಕಳಿಸಬೇಕು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಚಾಲನೆ ಮಾಡಬೇಕು ಇವೇ ಮುಂತಾದ ಬೇಡಿಕೆಗಳನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.
ಪಿಡಿಓ ಅಕ್ಕಮಹಾದೇವಿ ಅಂಗಡಿ ಮತ್ತು ಜೆಇ ಮಲ್ಲಿಕಾರ್ಜುನ ಹಿಕ್ಕನಗುತ್ತಿ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಬೇಡಿಕೆಗಳು ಈಡೇರುವವರೆಗೆ ಧರಣಿ ಮುಂದುವರೆಸುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೇಡಿಕೆಗಳು ಈಡೇರುವ ವರೆಗೂ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ವಿಠೋಬಾ ನಾಟೀಕಾರ, ನಿತ್ಯಾನಂದ ಕತ್ತಿ, ಮಾಂತಪ್ಪ ಸಂದಿಮನಿ, ದಾನೇಶ ಕೇಸರಿ, ಶರಣಪ್ಪ ಗದ್ದಗಿ, ಮುತ್ತು ಬಯ್ಯಾರ, ರಾಜು ಸಂದಿಮನಿ, ಸುಸಿಲಬಾಯಿ ಮಾದರ, ಸೀತಮ್ಮ ಗೆದ್ದಲಮಾರಿ, ರಾಮನಗೌಡ ಯಾಳವಾರ, ಮಾಂತಪ್ಪ ಗುಡಿಸಲಮನಿ, ಸಂತೋಷ್ ದೊಡಮನಿ, ಆನಂದ ಕಲಕೇರಿ, ದ್ಯಾವಪ್ಪ ದೊಡಮನಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.