ಮಾರಕಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಇಬ್ಬರ ಬಂಧನ
ಕಲಬುರಗಿ,ಮಾ.23-ನಗರದ ಉದನೂರ ಕ್ರಾಸ್ ಹತ್ತಿರದ ಬಾರ್ ಮತ್ತು ರೆಸ್ಟೋರಂಟ್ ಎದರುಗಡೆಯ ರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಇಬ್ಬರು ಕೈಯಲ್ಲಿ ಚಾಕು ಮತ್ತು ಕೊಯಿತಾ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂಬ ಮಾಹಿತಿ ಮೇಲೆ ಅಶೋಕನಗರ ಪೊಲೀಸ್ ಠಾಣೆಯ ಎಎಸ್‍ಐ ಚಂದ್ರಕಾಂತ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಗುರುಮೂರ್ತಿ, ವೈಜನಾಥ ಮತ್ತು ಶಿವಲಿಂಗ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಜಾಧವ್ ಲೇಔಟ್‍ನ ಅಂಬ್ರೀಶ್ ರಾಠೋಡ್ (43) ಮತ್ತು ಕೆಹೆಚ್‍ಬಿ ಕಾಲೋನಿಯ ರಾeಶೇಖರ ರಾಠೋಡ್ (30) ಎಂಬುವವರನ್ನು ಬಂಧಿಸಿ ಚಾಕು ಮತ್ತು ಕೊಯಿತಾ ಹಾಗೂ ಡಸ್ಟರ್ ಕಾರು ಜಪ್ತಿ ಮಾಡಿದ್ದಾರೆ.
ಈ ಇಬ್ಬರು ಆರೋಪಿಗಳು ರೌಡಿಶೀಟರ್ ಆಗಿದ್ದು, ಈ ಹಿಂದೆ ನಗರದ ಗೋದುತಾಯಿ ಕಾಲೋನಿಯಲ್ಲಿ ಟೈಲ್ಸ್ ವ್ಯಾಪಾರಿಗೆ ಗುಂಡು ಹಾರಿಸಿ ಹಣದ ಬ್ಯಾಗ್ ಕಿತ್ತುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.