ಪರೀಕ್ಷೆಗೆ ಭಯಬೇಡ, ಎದುರಿಸುವ ಛಲವಿರಲಿ:ಪಾರ್ವತಮ್ಮ
ಸೈದಾಪುರ:ಮಾ.23:ಪರೀಕ್ಷೆಗೆ ಭಯಬೇಡ ಎದುರಿಸುವ ಛಲವಿರಲಿ ಎಂದು ಮುಖ್ಯಗುರು ಪಿ.ಪಾರ್ವತಮ್ಮ ಅಭಿಪ್ರಾಯಪಟ್ಟರು.
ಸಮೀಪದ ಇಡ್ಲೂರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರೀಕ್ಷೆಯ ದಿನದಂದು ಪ್ರವೇಶ ಪತ್ರವನ್ನು ಮರೆಯದೆ ತೆಗೆದುಕೊಂಡು ಹೋಗುವುದರ ಜೊತೆಗೆ ನಿಗದಿತ ಸಮಯದ ಮುಂಚೆ ಪರೀಕ್ಷಾ ಕೇಂದ್ರದಲ್ಲಿರಬೇಕು. ಪರೀಕ್ಷೆ ಎನ್ನುವುದು ಜೀವನದಲ್ಲಿನ ಒಂದು ಭಾಗ. ಹೆಚ್ಚು ಒತ್ತಡಕ್ಕೆ ಗುರಿಯಾಗದೆ ಪ್ರಶಾಂತವಾಗಿ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಿಕ್ಷಕರಾದ ಶಶಿಕಲಾ, ಶರಣಪ್ಪ, ಎಸ್.ಎಸ್.ಗಡ್ಡಿ, ಜೈತುನ್ನಿಸ ಬೆಗಂ, ಶಿವಲೀಲಾ, ಅನ್ನಪೂರ್ಣ, ರವಿಕುಮಾರ, ಮಹೇಶ, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.